ನವದೆಹಲಿ: ಪ್ರತಿಭಾನ್ವಿತ ಶೂಟರ್ ಮನು ಭಾಕರ್ ಐಎಸ್ಎಸ್ಎಫ್ ಜೂನಿಯರ್ ವಿಶ್ವಚಾಂಪಿಯನ್ಶಿಪ್ನಲ್ಲಿ 3ನೇ ದಿನವಾದ ಇಂದು 2 ಚಿನ್ನದ ಪದಕ ಸೇರಿದಂತೆ ಒಟ್ಟು 3 ಸ್ವರ್ಣ ಪದಕಗಳಿಗೆ ಮುತ್ತಿಕ್ಕಿದ್ದಾರೆ. ಸ್ಟಾರ್ ಶೂಟರ್ ಮನು ಭಾಕರ್ ಒಬ್ಬರೇ 3 ಚಿನ್ನದ ಪದಕ ಸಾಧನೆ ಮಾಡಿದ್ದಾರೆ.
ಪೆರುವಿನ ಲಿಮಾದಲ್ಲಿ ನಡೆಯುತ್ತಿರುವ ಚಾಂಪಿಯನ್ಶಿಪ್ನಲ್ಲಿ ಭಾರತ 10 ಮೀಟರ್ ಏರ್ ಪಿಸ್ತೂಲ್ನ ಮಹಿಳೆಯರ ವಿಭಾಗ, ಮಿಶ್ರ ವಿಭಾಗ ಮತ್ತು ಪುರುಷರ ವಿಭಾಗದಲ್ಲಿ 3 ಚಿನ್ನದ ಪದಕ ಮತ್ತು ಪುರುಷರ ಏರ್ ರೈಫಲ್ನಲ್ಲಿ ಮತ್ತೊಂದು ಚಿನ್ನದ ಪದಕ ಪಡೆದಿದ್ದಾರೆ.
ಮನು ಭಾಕರ್ ಭಾನುವಾರ 2 ಚಿನ್ನ ಸೇರಿದಂತೆ ಒಟ್ಟು ಚಾಂಪಿಯನ್ಶಿಪ್ನಲ್ಲಿ 3 ಚಿನ್ನದ ಪದಕ ಮುಡಿಗೇರಿಸಿಕೊಂಡರು. ಅವರು ಸರಬ್ಜೋತ್ ಸಿಂಗ್ ಜೊತೆಯಾಗಿ ಮಿಶ್ರ ತಂಡದ ವಿಭಾಗದಲ್ಲಿ, ರಾದಮ್ ಸಂಗ್ವಾನ್ ಮತ್ತು ಶಿಖಾ ನರ್ವಾಲ್ ಜೊತೆಯಾಗಿ ವುಮೆನ್ಸ್ ತಂಡ ಬೆಲಾರಸ್ ಮಹಿಳಾ ತಂಡವನ್ನು 16-12ರಲ್ಲಿ ಮಣಿಸಿ 2ನೇ ಚಿನ್ನದ ಪದಕ ಪಡೆದರು. ಎರಡು ದಿನಗಳ ಹಿಂದೆ ಮಹಿಳೆಯರ ವಿಭಾಗದಲ್ಲಿ ತಮ್ಮ ಮೊದಲ ಚಿನ್ನ ಗೆದ್ದಿದ್ದರು.
ಪುರುಷರ ವಿಭಾಗದ ಏರ್ ಪಿಸ್ತೂಲ್ ವಿಭಾಗದಲ್ಲಿ ನವೀನ್, ಸರಬ್ಜೋತ್ ಸಿಂಗ್ ಮತ್ತು ಶಿವ ನರ್ವಾಲ್ ಇದ್ದ ತಂಡ ಬೆಲಾರಸ್ ತಂಡವನ್ನು 16-14ರಲ್ಲಿ ಮಣಿಸಿ ಚಿನ್ನದ ಪದಕ ಪಡೆದರು.
ಭಾರತ ಒಟ್ಟಾರೆ 6 ಚಿನ್ನ, 6 ಬೆಳ್ಳಿ ಮತ್ತು 2 ಕಂಚು ಸೇರಿದಂತೆ 14 ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಮೆರಿಕ 4 ಚಿನ್ನ, 4 ಬೆಳ್ಳಿ ಮತ್ತು 2 ಕಂಚು ಪಡೆದು 2ನೇ ಸ್ಥಾನದಲ್ಲಿದೆ.