ನವದೆಹಲಿ: ಟೋಕಿಯೋ ಪ್ಯಾರಾ ಒಲಿಂಪಿಕ್ಸ್ನಲ್ಲಿ ಚಿನ್ನ ಪಡೆದು ಮಿಂಚಿದ್ದ ಭಾರತದ ಪ್ರಮೋದ್ ಭಗತ್ ಸ್ಪ್ಯಾನಿಷ್ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್ನ್ಯಾಷನಲ್-2 ಟೂರ್ನಿಯಲ್ಲಿ ಮೂರು ವಿಭಾಗಗಳಲ್ಲೂ ಚಿನ್ನ ಪದಕ ಪಡೆದು ಪಾರುಪತ್ಯ ಮರೆದಿದ್ದಾರೆ.
ಸ್ಪೇನ್ನ ವಿಟೋರಿಯಾದಲ್ಲಿ ರವಿವಾರ ಮುಕ್ತಾಯವಾದ ಟೂರ್ನಿಯಲ್ಲಿ ವಿಶ್ವದ ಅಗ್ರಶ್ರೇಯಾಂಕಿತ ಆಟಗಾರ ಪ್ರಮೋದ್ ಭಗತ್ ಅವರು ಸಿಂಗಲ್ಸ್ನಲ್ಲಿ ಕುಮಾರ ನಿತೇಶ್ ಅವರೊಂದಿಗೆ ಕಠಿಣ ಪೈಪೋಟಿಯಲ್ಲಿ ಗೆಲುವು ಸಾಧಿಸಿದರು. ಒಂದು ಗಂಟೆ ನಿಮಿಷದ ನಡೆದ ಪಂದ್ಯದಲ್ಲಿ 17-21, 21-17, 21-17 ಅಂತರದೊಂದಿಗೆ ಭಗತ್ ಬಂಗಾರದ ಪದಕಕ್ಕೆ ಮುತ್ತಿಕ್ಕಿದರು.
ಪುರುಷರ ಡಬಲ್ಸ್ನಲ್ಲಿ ಭಗತ್ ಮತ್ತು ಮನೋಜ್ ಸರ್ಕಾರ್ ಜೋಡಿಯು ಭಾರತದ ಸುಕಾಂತ ಕದಂ ಮತ್ತು ನಿತೇಶ್ ಜೋಡಿಯನ್ನು ಪರಾಭವಗೊಳಿಸಿತು. ಸಾಕಷ್ಟು ಏರಿಳಿತದಿಂದ ಕೂಡಿದ್ದ ಪಂದ್ಯದಲ್ಲಿ 21-19, 11-21, 21-11 ಅಂತರದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.
ನಂತರ ಮಿಶ್ರ ಡಬಲ್ಸ್ನಲ್ಲಿ ಪಾಲಕ್ ಕೊಹ್ಲಿ ಜತೆಗೂಡಿ ಪ್ರಮೋದ್ ಭಗತ್ ಕೂಡ ಸ್ವರ್ಣ ಪದಕ ಗೆದ್ದರು. ಭಾರತದ ಋತಿಕ್ ರಘುಪತಿ ಮತ್ತು ಮಾನಸಿ ಗಿರೀಶಚಂದ್ರ ಜೋಶಿ ಎದುರು 14-21, 21-11, 21-14 ಅಂತರದಲ್ಲಿ ಜಯಗಳಿಸಿದರು.
ಮೂರು ಚಿನ್ನದ ಪದಕಗಳ ಗೆಲುವಿನ ಬಗ್ಗೆ ಖುಷಿ ಹಂಚಿಕೊಂಡಿರುವ ಭಗತ್, ಇದು ನನ್ನ ಪಾಲಿಗೆ ವಿಶೇಷ ಟೂರ್ನಿ. 2 ಟೂರ್ನಿಗಳ ನಂತರ ನನಗೆ ಸಿಕ್ಕ ಮೊದಲ ಜಯ ಎಂದು ತಿಳಿಸಿದ್ದಾರೆ.
ಸುಕಾಂತ ಕದಂಗೆ 2 ಪದಕ: ಮತ್ತೋರ್ವ ಆಟಗಾರ ಸುಕಾಂತ ಕದಂ ಕೂಡ ಒಂದು ಚಿನ್ನ ಮತ್ತು ಬೆಳ್ಳಿಯ ಪದಕ ಗೆದ್ದು ಮಿಂಚಿದ್ದಾರೆ. ವಿಶ್ವ ನಂ.4 ಆಟಗಾರನಾದ ಸುಕಾಂತ ಕದಂ ಅವರು ಜರ್ಮನ್ನ ಮಾರ್ಸೆಲ್ ಆಡಮ್ ವಿರುದ್ಧ 21-13, 21-18 ಅಂತರದಿಂದ ಜಯ ಸಾಧಿಸಿದರು. ಅಲ್ಲದೇ, ಪುರುಷರ ಡಬಲ್ಸ್ನಲ್ಲಿ ಭಗತ್ ಮತ್ತು ಮನೋಜ್ ಸರ್ಕಾರ್ ಜೋಡಿಯು ವಿರುದ್ಧ ಪರಾಭವಗೊಂಡು ಸುಕಾಂತ ಕದಂ ಮತ್ತು ನಿತೇಶ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ಇದನ್ನೂ ಓದಿ:ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಶೇನ್ ವಾರ್ನ್ಗೆ ಅಂತಿಮ ಗೌರವ