ಶೆಫೀಲ್ಡ್ (ಇಂಗ್ಲೆಂಡ್): ನಾಲ್ಕು ರಾಷ್ಟ್ರಗಳ ಪ್ಯಾರಾ ಬ್ಯಾಡ್ಮಿಂಟನ್ ಇಂಟರ್‌ನ್ಯಾಶನಲ್ ಕೂಟದಲ್ಲಿ ವಿಶ್ವದ ನಂ.1 ಪುರುಷರ ಡಬಲ್ಸ್ ಜೋಡಿ ಪ್ರಮೋದ್ ಭಗತ್ ಮತ್ತು ಸುಕಾಂತ್ ಕದಮ್ ಎಸ್.ಎಲ್ 3 ಮತ್ತು ಎಸ್‌ಎಲ್ 4 ವಿಭಾಗದಲ್ಲಿ ಚಿನ್ನ ಗೆದ್ದರು. ಭಗತ್ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಬೆಳ್ಳಿ ಹಾಗೂ ಮಿಶ್ರ ಡಬಲ್ಸ್ ಎಸ್‌ಎಲ್ 3, ಎಸ್‌ಯು 5 ವಿಭಾಗದಲ್ಲಿ ಮನೀಶಾ ರಾಮದಾಸ್ ಅವರೊಂದಿಗೆ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಕದಮ್ ಸಿಂಗಲ್ಸ್ ಎಸ್‌ಎಲ್4 ವಿಭಾಗದಲ್ಲಿ ಕಂಚಿಗೆ ತೃಪ್ತಿಪಟ್ಟರು.
ಪುರುಷರ ಡಬಲ್ಸ್‌ನಲ್ಲಿ ಭಗತ್ ಮತ್ತು ಕದಮ್ ಭಾರತದ ದೀಪ್ ರಂಜನ್ ಬಿಸೋಯಿ ಮತ್ತು ಮನೋಜ್ ಸರ್ಕಾರ್ ಜೋಡಿಯನ್ನು 21-17, 21-17 ಪಾಯಿಂಟುಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಪಡೆದರು. ಸಿಂಗಲ್ಸ್‌ನಲ್ಲಿ ಭಗತ್ 8-21, 10-21 ರಲ್ಲಿ ಇಂಗ್ಲೆಂಡ್‌ನ ಡೇನಿಯಲ್ ಬೆಥೆಲ್ ಎದುರು ಪರಾಭವಗೊಂಡರು. ಮಿಶ್ರ ಡಬಲ್ಸ್‌ನಲ್ಲಿ ಭಗತ್ ಮತ್ತು ಮನಿಶಾ ರಾಮದಾಸ್ 17-21,17-21 ರಲ್ಲಿ ಇಂಡೋನೇಷ್ಯಾದ ಹಿಕ್ಮತ್ ರಾಮ್‌ದಾನಿ ಮತ್ತು ಲಿಯಾನಿ ರಾತ್ರಿ ಒಕ್ಟಿಲಾ ವಿರುದ್ಧ ಸೋಲುಂಡರು.
ಪಂದ್ಯಗಳ ನಂತರ ಮಾತನಾಡಿದ ಭಗತ್, "ಡಬಲ್ಸ್ ಫಲಿತಾಂಶದಿಂದ ಸಂತಸವಾಗಿದೆ. ಆದರೆ, ನನ್ನ ಸಿಂಗಲ್ಸ್ ಮತ್ತು ಮಿಶ್ರ ಡಬಲ್ಸ್ ಫಲಿತಾಂಶ ಬೇಸರ ತರಿಸಿತು. ಡೇನಿಯಲ್ ಬೆಥೆಲ್ ಈ ವರ್ಷ ನನಗೆ ತುಂಬಾ ಸವಾಲಿನ ಎದುರಾಳಿಯಾಗಿದ್ದಾರೆ. ಅವರನ್ನು ಮಣಿಸಲು ನನ್ನ ಆಟದಲ್ಲಿ ಕೆಲವು ಸುಧಾರಣೆ ಮಾಡಿಕೊಳ್ಳಬೇಕಿದೆ. ನಾನು ತಕ್ಷಣ ತರಬೇತಿಗೆ ಹಿಂತಿರುಗುತ್ತೇನೆ. ನನ್ನ ದೌರ್ಬಲ್ಯಗಳ ಮೇಲೆ ಕೆಲಸ ಮಾಡುತ್ತೇನೆ" ಎಂಬ ಆತ್ಮವಿಶ್ವಾಸದ ನುಡಿಗಳನ್ನಾಡಿದರು.