ಸರ್ಬಿಯಾ:ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಬಜರಂಗ್ ಪೂನಿಯಾ ವಿನೂತನ ಇತಿಹಾಸ ಸೃಷ್ಟಿಸಿದರು. 65 ಕೆಜಿ ವಿಭಾಗದ ಪಂದ್ಯದಲ್ಲಿ ಕ್ವಾರ್ಟರ್ಫೈನಲ್ನಲ್ಲಿ ಇವರು ಸೋತಿದ್ದರು. ಆದರೆ, ರಿಪೇಚ್ ಸುತ್ತಿನ ಮೂಲಕ ಕಂಚಿಗೋಸ್ಕರ ಹೋರಾಟ ನಡೆಸಿ ಗೆದ್ದು ಬೀಗಿದ್ದಾರೆ. ಈ ಮೂಲಕ ವಿಶ್ವ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ನಾಲ್ಕು ಪದಕ ಗೆದ್ದಿರುವ ಭಾರತದ ಏಕೈಕ ಕುಸ್ತಿಪಟುವಾಗಿ ಬಜರಂಗ್ ಹೊರಹೊಮ್ಮಿದರು.
ಕಳೆದ ವರ್ಷ ಟೋಕಿಯೋ ಒಲಿಂಪಿಕ್ನಲ್ಲಿ ಕಂಚು ಗೆದ್ದಿದ್ದ ಬಜರಂಗ್, ಇದೀಗ ಪೋರ್ಟೋ ರಿಕೊದ ಸೆಬಾಸ್ಟಿಯನ್ ಸಿ ರಿವೇರಾ ವಿರುದ್ಧ 11-9 ಅಂಕಗಳ ಅಂತರದಿಂದ ಗೆಲುವು ಸಾಧಿಸಿ ಕಂಚಿಗೆ ಮುತ್ತಿಕ್ಕಿದ್ದಾರೆ. ಕ್ವಾರ್ಟರ್ಫೈನಲ್ನಲ್ಲಿ ಅಮೆರಿಕದ ಜಾನ್ ಮೈಕೆಲ್ ಡಯಾಕೊಮಿಹಾಲಿಸ್ ವಿರುದ್ಧ ಇವರಿಗೆ ಸೋಲಾಗಿತ್ತು. ಆದರೆ, ಮೈಕೆಲ್ ಫೈನಲ್ಗೆ ಪ್ರವೇಶ ಪಡೆದುಕೊಂಡಿದ್ದರಿಂದ ಬಜರಂಗ್‌ಗೆ ರಿಪೇಚ್ ಸುತ್ತಿನಲ್ಲಿ ಕಂಚಿಗೋಸ್ಕರ ಸೆಣಸಾಡುವ ಅವಕಾಶ ಸಿಕ್ಕಿತ್ತು.
ಬಜರಂಗ್ ಈ ಹಿಂದೆ 2013 ರಲ್ಲಿ ಕಂಚು, 2018ರಲ್ಲಿ ಬೆಳ್ಳಿ ಹಾಗೂ 2019ರಲ್ಲಿ ಕಂಚು ಗೆದ್ದಿದ್ದರು.