ರೋಮ್:ಭಾರತದ ಒಲಿಂಪಿಕ್ ಬಾಂಡ್ ಕುಸ್ತಿಪಟು ಬಜರಂಗ್ ಪೂನಿಯಾ ರೋಮ್ನಲ್ಲಿ ನಡೆಯುತ್ತಿರುವ ಮಟಿಯೊ ಪೆಲಿಕಾನ್ ರ‍್ಯಾಂಕಿಂಗ್ ಸೀರಿಸ್ ಕುಸ್ತಿ ಚಾಂಪಿಯನ್ಶೀಪ್ನಲ್ಲಿ ಹಿನ್ನಡೆಯ ಹೊರತಾಗಿಯೂ ಕೊನೆಯ 30 ಸೆಕೆಂಡ್ಗಳಲ್ಲಿ ಎದುರಾಳಿ ವಿರುದ್ಧ ಪ್ರಾಬಲ್ಯ ಸಾಧಿಸಿ 2 ಅಂಕ ಪಡೆದು ಚಿನ್ನದ ಪದಕ ಗೆದ್ದರು. ಜೊತೆಗೆ 65 ಕೆ.ಜಿ ವಿಭಾಗದಲ್ಲಿ ಮತ್ತೆ ಅಗ್ರಸ್ಥಾನಕ್ಕೆ ಮರಳಿದರು.
ಭಾನುವಾರ ರಾತ್ರಿ ಮಂಗೋಲಿಯಾದ ಟಲ್ಗಾ ತುಮುರ್ ಒಚಿರ್‌ನಲ್ಲಿ ನಡೆದ ಫೈನಲ್ ಬೌಟ್‌ನಲ್ಲಿ ಭಜರಂಗ್ 0-2ನಲ್ಲಿ ಹಿನ್ನಡೆ ಅನುಭವಿಸಿದ್ದರು. ಆದರೆ ಕೊನೆಯ 30 ಸೆಕೆಂಡುಗಳಲ್ಲಿ ಅಂಕವನ್ನು ಸರಿದೂಗಿಸುವ ಮೂಲಕ ಗೆಲುವು ಸಾಧಿಸಿ ಪ್ರಶಸ್ತಿಯನ್ನು ತಮ್ಮಲ್ಲೇ ಉಳಿಸಿಕೊಂಡರು. ಕಳೆದ ವರ್ಷವೂ ಭಜರಂಗ್ ಈ ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು.
ಇಬ್ಬರು ಸ್ಪರ್ಧಿಗಳ ಅಂಕ 2-2 ಇದ್ದರೂ ಕೊನೆಯ ಸ್ಕೋರಿಂಗ್ ಪಾಯಿಂಟ್ ಭಾರತೀಯನಿಂದ ಬಂದಿದ್ದರಿಂದ, ಅವರನ್ನು ಮಾನದಂಡಗಳ ಮೇಲೆ ವಿಜೇತರೆಂದು ಘೋಷಿಸಲಾಯಿತು.
ಪಂದ್ಯದ ನಂತರ ಮಾತನಾಡಿದ ಪೂನಿಯಾ,"ಕೋವಿಡ್–19 ವಿರಾಮದ ನಂತರ ಇದೇ ಮೊದಲ ಬಾರಿಗೆ ರಿಂಗ್ನಲ್ಲಿ ಕಣಕ್ಕಿಳಿದಿದ್ದೇನೆ. ಹಿಂದಿಗಿಂತ ಈಗ ನನ್ನ ಲೆಗ್ ಡಿಫೆನ್ಸ್‌ನಲ್ಲಿ ಸುಧಾರಣೆ ಕಂಡಿದೆ. ಆದರೂ ಇನ್ನೂ ಹೆಚ್ಚಿನ ಪ್ರಯತ್ನದ ಅಗತ್ಯವಿದೆ. ಆಕ್ರಮಣದ ಮೇಲೆಯೂ ಹೆಚ್ಚು ಗಮನ ನೀಡಬೇಕಾಗಿದೆ" ಎಂದು ಹೇಳಿದರು.
ಮಂಗೋಲಿಯನ್ ಕುಸ್ತಿಪಟು ವಿರುದ್ಧ ಒತ್ತಡ ಅನುಭಿಸಿರುವ ಬಗ್ಗೆ ಕೇಳಿದ್ದಕ್ಕೆ, 65 ಕೆಜಿ ವಿಭಾಗದಲ್ಲಿ ಕಠಿಣ ಸ್ಪರ್ಧೆ ಇರುತ್ತದೆ. ಫೈನಲ್‌ನಲ್ಲಿ ನನ್ನ ಎದುರಾಳಿಯಾಗಿದ್ದ ಮಂಗೋಲಿಯನ್ ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ. ಅವರೂ ದುರ್ಬಲ ಎದುರಾಳಿಯಲ್ಲ. ಈ ವಿಭಾಗದ ಎಲ್ಲಾ ಸ್ಪರ್ಧಿಗಳು ಒಲಿಂಪಿಕ್ನಲ್ಲಿ ಇದೇ ಮನೋಭಾವದಲ್ಲಿ ಆಡುವ ಗುರಿ ಹೊಂದಿದ್ದಾರೆ. ಹೀಗಾಗಿ ಪೈಪೋಟಿ ಕಠಿಣವಾಗಿತ್ತು. ಕೊನೆಗೂ ಗೆಲುವು ದೊರೆತಿದ್ದಕ್ಕೆ ಸಂತೋಷವಿದೆ" ಎಂದರು.
ಈ ಟೂರ್ನಿಯಲ್ಲಿ ಭಾರತ 7 ಪದಕಗಳನ್ನು ಪಡೆದುಕೊಂಡಿದೆ. ಭಾನುವಾರ ನಡೆದ ಮತ್ತೊಂದು ಪಂದ್ಯದಲ್ಲಿ 70 ಕೆ.ಜಿ ವಿಭಾಗದಲ್ಲಿ ವಿಶಾಲ್ ಕಾಳಿರಮಣ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು. ನಿನ್ನ ವೀನಸ್ ಪೋಗಟ್ ಚಿನ್ನದ ಪದಕ, ಸರಿತಾ ಮೋರ್ ಬೆಳ್ಳಿ ಗೆದ್ದಿದ್ದರು. ಗ್ರೀಕೋ ರೋಮನ್ ವಿಭಾಗದಲ್ಲಿ ನೀರಜ್(63 ಕೆಜಿ), ಕುಲದೀಪ್(72ಕೆಜಿ),ನವೀನ್(130ಕೆಜಿ) ಕಂಚಿನ ಪದಕಕ್ಕೆ ಕೊರಳೊಡ್ಡಿದ್ದರು.
ಇದನ್ನೂ ಓದಿ: ಮಹಿಳೆಯರ ಕ್ರಿಕೆಟ್‌ಗೆ ತೋರುದೀಪವಾದ ಹರ್ಮನ್ ಪ್ರೀತ್ ಕೌರ್ ಇನ್ನಿಂಗ್ಸ್!