ದುಬೈ (ಯುಎಇ):ಇಲ್ಲಿನ ಶೇಖ್ ರಶೀದ್ ಬಿನ್ ಹಮ್ದಾನ್ ಇಂಡೋರ್ ಹಾಲ್‌ನಲ್ಲಿ ನಡೆದ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನ ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ಪಿವಿ ಸಿಂಧು ಅವರು ವಿಶ್ವದ ನಂ. 2ನೇ ಶ್ರೇಯಾಂಕಿತ ಆ್ಯನ್ ಸೆ ಯಂಗ್ ವಿರುದ್ಧ ಸೋಲನುಭವಿಸಿದರು. ಇದರಿಂದ 2023 ರ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಿಂದ ಹೊರಬಿದ್ದಿದ್ದಾರೆ. ಶುಕ್ರವಾರ ನಡದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ವಿಶ್ವದ 11ನೇ ಶ್ರೇಯಾಂಕಿತೆ ಸಿಂಧು 21-18, 5-21, 9-21 ಅಂತರದಲ್ಲಿ ದಕ್ಷಿಣ ಕೊರಿಯಾದ ಶಟ್ಲರ್ ವಿರುದ್ಧ ಸತತ ಆರನೇ ಸೋಲು ಅನುಭವಿಸಿದರು.
ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಸಿಂಧು ಉತ್ತಮ ಆಟ ಆರಂಭಿಸಿದರು. ಒಂದು ಹಂತದಲ್ಲಿ 13-16 ರಿಂದ ಹಿನ್ನಡೆಯಲ್ಲಿದ್ದರೂ ಮೊದಲ ಗೇಮ್ ಗೆದ್ದರು. ಭಾರತೀಯ ಆಟಗಾರ್ತಿ ತಮ್ಮ ಹಿಂದಿನ ಐದು ಹಣಾಹಣಿಯಲ್ಲಿ ಆನ್ ಸೆ ಯಂಗ್ ವಿರುದ್ಧ ಒಂದು ಪಂದ್ಯವನ್ನೂ ಗೆದ್ದಿರಲಿಲ್ಲ. ಆ್ಯನ್ ಸೆ ಯಂಗ್ ಎರಡನೇ ಗೇಮ್ನಲ್ಲಿ ಪ್ರಾಬಲ್ಯ ಮೆರೆದರು. ಮೂರನೇ ಸೆಟ್ನಲ್ಲಿ ಸಿಂಧು ಹೊರಾಟ ನಡೆಸಿದರಾದರೂ ಯಂಗ್ ಅವರನ್ನು ಭೇದಿಸಲು ಸಾಧ್ಯವಾಗಲಿಲ್ಲ.
ಕಳೆದ ವರ್ಷ ಮನಿಲಾದಲ್ಲಿ ನಡೆದ ಏಷ್ಯನ್ ಚಾಂಪಿಯನ್‌ಶಿಪ್‌ನ ಕೊನೆಯ ಆವೃತ್ತಿಯಲ್ಲಿ, ಸಿಂಧು ಸೆಮಿಫೈನಲ್‌ನಲ್ಲಿ ಅಕಾನೆ ಯಮಗುಚಿ ವಿರುದ್ಧ ಸೋತು ಕಂಚಿಗೆ ತೃಪ್ತಿಪಟ್ಟಿದ್ದರು. 27ರ ಹರೆಯದ ಸಿಂಧು 2014ರಲ್ಲಿ ಕಂಚು ಗೆದ್ದಿದ್ದರು.
ಇನ್ನೊಂಡೆದೆ ಭಾರತದ ರೋಹನ್ ಕಪೂರ್-ಎನ್ ಸಿಕ್ಕಿ ರೆಡ್ಡಿ ಅವರ ಮಿಶ್ರ ಡಬಲ್ಸ್ ತಂಡವು ಕ್ವಾರ್ಟರ್ ಫೈನಲ್‌ನಲ್ಲಿ ಇಂಡೋನೇಷ್ಯಾದ ಡೆಜಾನ್ ಫರ್ಡಿನಾನ್ಸ್ಯಾ-ಗ್ಲೋರಿಯಾ ಇಮ್ಯಾನುಯೆಲ್ಲೆ ವಿಡ್ಜಾಜಾ ಅವರ ವಿಶ್ವದ ನಂ. 19 ಜೋಡಿ ವಿರುದ್ಧ 18-21, 21-19, 15-21 ರಿಂದ ಸೋತಿದೆ.