ದುಬೈ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್‌ನಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾರತಕ್ಕೆ ಎರಡನೇ ಚಿನ್ನದ ಪದಕ ಗೆದ್ದುಕೊಟ್ಟು ಇತಿಹಾಸ ನಿರ್ಮಿಸಿದ್ದಾರೆ. ಭಾನುವಾರ ಇಲ್ಲಿ ನಡೆದ ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಈ ಜೋಡಿ ಮಲೇಷ್ಯಾದ ಎಂಟನೇ ಶ್ರೇಯಾಂಕದ ಯೂ ಸಿನ್ ಒಂಗ್ ಮತ್ತು ಈ ಯಿ ಟಿಯೊ ಅವರನ್ನು ಮಣಿಸಿದರು.
2023ರ ಆವೃತ್ತಿಯ ಪ್ರಶಸ್ತಿ ಸುತ್ತಿನಲ್ಲಿ ಸಾತ್ವಿಕ್ ಸಾಯಿರಾಜ್- ಚಿರಾಗ್ ಜೋಡಿ ಯೂ ಸಿನ್ ಒಂಗ್ ಮತ್ತು ಈ ಯಿ ಟಿಯೊ ಅವರನ್ನು 16-21, 21-17, 21-19 ರಿಂದ ಸೋಲಿಸಿದರು. ಮೊದಲ ಗೇಮ್‌ನಲ್ಲಿ ಸೋತ ನಂತರ ಮುಂದಿನ ಎರಡು ಗೇಮ್‌ಗಳನ್ನು ಗೆದ್ದು ಐತಿಹಾಸಿಕ ಸಾಧನೆ ತೋರಿದ್ದಾರೆ.
ದಿನೇಶ್ ಖನ್ನಾ 1965ರಲ್ಲಿ ಪುರುಷರ ಸಿಂಗಲ್ಸ್ ಚಿನ್ನ ಗೆದ್ದ ನಂತರ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ದೊರೆತ ಎರಡನೇ ಚಿನ್ನದ ಪದಕ ಇದಾಗಿದೆ. ಏಷ್ಯನ್ ಚಾಂಪಿಯನ್‌ಶಿಪ್‌ನ ಫೈನಲ್ ತಲುಪಿದ ಮೊದಲ ಡಬಲ್ಸ್ ಭಾರತೀಯ ಜೋಡಿ ಇದಾಗಿದ್ದು, ಪದಕ ಮುಡಿಗೇರಿಸಿಕೊಂಡ ಮೊದಲ ಕ್ರೀಡಾಪಟುಗಳೂ ಇವರೇ ಆಗಿದ್ದಾರೆ.
ಟೋಕಿಯೊದಲ್ಲಿ ನಡೆದ 2022ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾತ್ವಿಕ್ ಮತ್ತು ಚಿರಾಗ್, ಏಷ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ (2016, 2020) ಎರಡು ಕಂಚಿನ ಪದಕ ಸಾಧನೆ ಮಾಡಿದ್ದರು.
ಸೆಮಿಫೈನಲ್ನಲ್ಲಿ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಚೈನೀಸ್ ತೈಪೆಯ ಲೀ ಯಾಂಗ್ ಮತ್ತು ವಾಂಗ್ ಚಿ-ಲಿನ್ ಅವರನ್ನು ಎದುರಿಸಿ ಮಣಿಸಿ ಫೈನಲ್ ಪ್ರವೇಶ ಪಡೆದುಕೊಂಡಿದ್ದರು. ಕ್ವಾರ್ಟರ್ಫೈನಲ್ನಲ್ಲಿ ಇಂಡೋನೇಷ್ಯಾದ ಜೋಡಿಯಾದ ಮೊಹಮ್ಮದ್ ಅಹ್ಸಾನ್ ಮತ್ತು ಹೆಂಡ್ರಾ ಸೆಟಿಯಾವಾನ್ ವಿರುದ್ಧದ ಪಂದ್ಯದಲ್ಲಿ ಭಾರತದ ಜೋಡಿ 21-11 21-12 ಅಂತರದಿಂದ ಗೆದ್ದಿದ್ದರು. ಭಾರತದ ಜೋಡಿಯು ಮಲೇಷ್ಯಾದ ತಾನ್ ಕಿಯಾನ್ ಮೆಂಗ್ ಮತ್ತು ತಾನ್ ವೀ ಕಿಯೊಂಗ್ ವಿರುದ್ಧ 21-14, 21-17 ಅಂತರದಲ್ಲಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದರೆ, ನಂತರ ಅವರು 16 ರ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಜಿನ್ ಯೋಂಗ್ ಮತ್ತು ನಾ ಸುಂಗ್ ಸೆಯುಂಗ್ ಅವರನ್ನು 21-13, 21-11 ರಿಂದ ಸೋಲಿಸಿದರು.
ಪ್ರಧಾನಿ ಮೋದಿ ಅಭಿನಂದನೆ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್ ಗೆದ್ದ ಸಾತ್ವಿಕ್ ರಾಜ್ ಮತ್ತು ಚಿರಾಗ್ ಶೆಟ್ಟಿ ಜೋಡಿಯನ್ನು ಪ್ರಧಾನಿ ಮೋದಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ. ಐತಿಹಾಸಿಕ ಸಾಧನೆ ಹೆಮ್ಮೆ ತಂದಿದೆ. ಅಭಿನಂದನೆಗಳು, ಮುಂದಿನ ಸ್ಪರ್ಧೆಗಳಿಗೂ ಶುಭ ಹಾರೈಕೆಗಳು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್‌ಶಿಪ್: ಕ್ವಾರ್ಟರ್ ಫೈನಲ್‌ನಲ್ಲಿ ಸಿಂಧುಗೆ ಸೋಲು