ಕರ್ನಾಟಕ

karnataka

ETV Bharat / sports

ಏಷ್ಯನ್ ಗೇಮ್ಸ್: ಶಾಟ್‌ಪುಟ್​, ಸ್ಟೀಪಲ್ ಚೇಸ್‌ನಲ್ಲಿ ಭಾರತಕ್ಕೆ ಬಂಗಾರ; ನಿಖತ್ ಜರೀನ್‌ಗೆ ಕಂಚು - Nikhat Zareen

Asian Games 2023, Day 8: 2023ರ ಏಷ್ಯನ್ ಗೇಮ್ಸ್‌ನಲ್ಲಿ ಅವಿನಾಶ್ ಸೇಬಲ್ ಅವರು 3,000 ಮೀಟರ್ ಸ್ಟೀಪಲ್ ಚೇಸ್ ಅ​ನ್ನು 8.19.54 ಸೆಕೆಂಡ್‌ನಲ್ಲಿ ಪೂರ್ಣಗೊಳಿಸಿ ಮೊದಲ ಸ್ಥಾನ ಪಡೆದರು. ಗುಂಡು ಎಸೆತದಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ 20.36 ಮೀ ದೂರ ಎಸೆದು 13ನೇ ಚಿನ್ನ ಗೆದ್ದರು.

Etv Bharat
Etv Bharat

By ETV Bharat Karnataka Team

Published : Oct 1, 2023, 5:32 PM IST

Updated : Oct 1, 2023, 6:17 PM IST

ಹ್ಯಾಂಗ್‌ಝೌ (ಚೀನಾ):ಏಷ್ಯನ್​ ಗೇಮ್ಸ್​​ನಲ್ಲಿ 8ನೇ ದಿನ ಭಾರತಕ್ಕೆ 3ನೇ ಚಿನ್ನದ ಪದಕ ಒಲಿದಿದೆ. ಪುರುಷರ ಟ್ರ್ಯಾಪ್​ ಶೂಟ್​ ವಿಭಾಗದಲ್ಲಿ ಇಂದು (ಭಾನುವಾರ) ಮೊದಲ ಬಂಗಾರ ಬಂದರೆ, ಅವಿನಾಶ್ ಸೇಬಲ್ 3000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಮತ್ತು ಪುರುಷರ ಶಾಟ್‌ಪುಟ್ (ಗುಂಡು ಎಸೆತ) ಸ್ಪರ್ಧೆಯಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್ ಚಿನ್ನ ಗೆದ್ದಿದ್ದಾರೆ. ಇದರಿಂದಾಗಿ 2023ರ ಏಷ್ಯಾಡ್​ನಲ್ಲಿ ಭಾರತಕ್ಕೆ 13ನೇ ಚಿನ್ನದ ಪದಕ ಸಿಕ್ಕಂತಾಗಿದೆ.

3,000 ಮೀಟರ್ ಸ್ಟೀಪಲ್ ಚೇಸ್​ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಅಥ್ಲೀಟ್ ಎಂಬ ಹೆಗ್ಗಳಿಕೆಗೂ ಅವಿನಾಶ್ ಸೇಬಲ್ ಪಾತ್ರರಾಗಿದ್ದಾರೆ. ಅವಿನಾಶ್ 8 ನಿಮಿಷ 19 ಸೆಕೆಂಡ್​ 54 ಕ್ಷಣಗಳಲ್ಲಿ 3000 ಮೀಟರ್​ ಓಟವನ್ನು ಪೂರ್ಣಗೊಳಿಸಿ ಮೊಲದ ಸ್ಥಾನ ಪಡೆದರು. ಇದು ಭಾರತಕ್ಕೆ ಅಥ್ಲೆಟಿಕ್ಸ್ ವಿಭಾಗದಲ್ಲಿ ದೊರೆತ ಮೊದಲ ಚಿನ್ನದ ಪದಕವೂ ಹೌದು.

ಅಲ್ಲದೇ, ಅವಿನಾಶ್ ಸೇಬಲ್ ಅವರ ಓಟದ ಸಮಯ ಏಷ್ಯನ್ ಗೇಮ್ಸ್​ನ ಹೊಸ ದಾಖಲೆಯಾಗಿದೆ. 29 ವರ್ಷದ ಅವಿನಾಶ್ 2022 ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಜಪಾನ್‌ನ ರ್ಯೋಮಾ ಅಕಿ ಮತ್ತು ಸೆಯಾ ಸುನದಾ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಶಾಟ್‌ಪುಟ್​​ನಲ್ಲಿ ತಜಿಂದರ್‌ಪಾಲ್ ಸಿಂಗ್ ತೂರ್​ಗೆ ಚಿನ್ನ: ಪುರುಷರ ಶಾಟ್‌ಪುಟ್ ಫೈನಲ್ ಪಂದ್ಯವನ್ನು ಭಾರತದ ಅಥ್ಲೀಟ್ ತಜಿಂದರ್‌ಪಾಲ್ ಸಿಂಗ್ ತೂರ್ 7.26 ಕೆಜಿ ಕಬ್ಬಿಣದ ಗುಂಡನ್ನು 20.36 ಮೀ ದೂರಕ್ಕೆಸೆದು ಸತತ ಎರಡನೇ ಏಷ್ಯಾಡ್ ಚಿನ್ನದ ಪದಕ ಗೆದ್ದರು. ಆರರಲ್ಲಿ ಮೂರು ಕ್ಲೀನ್ ಥ್ರೋಗಳನ್ನು ಮಾಡಿದರು. ಪ್ರತಿ ಮೂರು ಪ್ರಯತ್ನದಲ್ಲೂ ದೂರ ಹೆಚ್ಚಿಸಿದರು. ಆರಂಭದಲ್ಲಿ ಎರಡು ಫೌಲ್‌ ಮಾಡಿದರು. ಆದರೆ ಮೂರು, ನಾಲ್ಕು ಮತ್ತು ಆರನೇ ಎಸೆತಗಳು ಕ್ರಮವಾಗಿ 19.51 ಮೀ, 20.06 ಮತ್ತು 20.36 ಮೀ ದೂರ ದಾಖಲಿಸಿ ಗೆದ್ದರು.

ಪುರುಷರ ಶಾಟ್‌ಪುಟ್‌ ಫೈನಲ್‌ನಲ್ಲಿ ಸೌದಿ ಅರೇಬಿಯಾದ ಮೊಹಮದ್‌ ದೌಡಾ ಟೊಲೊ ಬೆಳ್ಳಿ ಗೆದ್ದರೆ, ಚೀನಾದ ಲಿಯು ಯಾಂಗ್‌ ಕಂಚಿನ ಪದಕಕ್ಕೆ ತೃಪ್ತಿಪಟ್ಟರು.

ಬಾಕ್ಸರ್‌ ನಿಖತ್ ಜರೀನ್‌ಗೆ ಕಂಚು: ಎರಡು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ನಿಖತ್ ಜರೀನ್ 2023ರ ಏಷ್ಯಾಡ್​ನಲ್ಲಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಭಾರತದ ಬಾಕ್ಸರ್ ಮಹಿಳೆಯರ 50 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಥಾಯ್ಲೆಂಡ್‌ನ ಚುತಮತ್ ರಕ್ಸತ್ ವಿರುದ್ಧ 3:2 ಪಾಯಿಂಟ್‌ಗಳಿಂದ ಸೋಲನುಭವಿಸಿದರು. ಥಾಯ್ ಬಾಕ್ಸರ್ ಚುತಮತ್ ರಕ್ಸತ್ ಮೊದಲ ಸುತ್ತಿನಲ್ಲಿ ಕಡಿಮೆ ಅಂಕ ಪಡೆದರಾದರೂ ಕಮ್​ಬ್ಯಾಕ್​ ಮಾಡಿ ಅಂತಿಮ ಎರಡು ಸುತ್ತುಗಳಲ್ಲಿ ಹೋರಾಡಿ ಗೆದ್ದರು.

ಭಾರತಕ್ಕೆ ಬಾಕ್ಸಿಂಗ್​ ವಿಭಾಗದಲ್ಲಿ ಪ್ರೀತಿ ಪವಾರ್ (ಮಹಿಳೆಯರ 54 ಕೆಜಿ), ಲೊವ್ಲಿನಾ ಬೊರ್ಗೊಹೈನ್ (ಮಹಿಳೆಯರ 75 ಕೆಜಿ) ಮತ್ತು ನರೇಂದರ್ ಬರ್ವಾಲ್ (ಪುರುಷರ +92 ಕೆಜಿ) ಅವರಿಂದ ಪದಕದ ನಿರೀಕ್ಷೆ ಇದೆ.

ಭಾರತ ಪ್ರಸ್ತುತ 13 ಚಿನ್ನ, 16 ಬೆಳ್ಳಿ ಮತ್ತು 16 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಚೀನಾ 229 (121 ಚಿನ್ನ, 71 ಬೆಳ್ಳಿ, 37 ಕಂಚು), ದಕ್ಷಿಣ ಕೊರಿಯಾ (121), ಜಪಾನ್ (106) ಪದಕಗಳೊಂದಿಗೆ ಭಾರತಕ್ಕಿಂತ (44) ಮುಂದಿದೆ.

ಇದನ್ನೂ ಓದಿ:ವೈಯಕ್ತಿಕ ಟ್ರ್ಯಾಪ್ ಶೂಟಿಂಗ್‌ನಲ್ಲಿ ಕಿನಾನ್ ಚೆನೈಗೆ ಕಂಚು; ಶೂಟಿಂಗ್​ನಲ್ಲಿ ಭಾರತಕ್ಕೆ 22ನೇ ಪದಕ

Last Updated : Oct 1, 2023, 6:17 PM IST

ABOUT THE AUTHOR

...view details