ಅಡಿಲೇಡ್(ಆಸ್ಟ್ರೇಲಿಯಾ) :ಟೋಕಿಯೋ ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ನಡೆದ ಟ್ರಯಲ್ಸ್‌ನಲ್ಲಿ ಆಸ್ಟ್ರೇಲಿಯಾ ಈಜುಗಾರ್ತಿಯೊಬ್ಬಳು ಬ್ಯಾಕ್ ಸ್ಟ್ರೋಕ್‌ನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾಳೆ. ದಕ್ಷಿಣ ಆಸ್ಟ್ರೇಲಿಯಾದ ಆಕ್ವಾಟಿಕ್ ಕೇಂದ್ರದಲ್ಲಿ ನಡೆದ ಸ್ಪರ್ಧೆಯಲ್ಲಿ 19 ವರ್ಷದ ಮೆಕಾನ್ 100 ಮೀಟರ್ ದೂರವನ್ನು 57.45 ಸೆಕೆಂಡುಗಳಲ್ಲಿ ಕ್ರಮಿಸಿದರು. ಈ ಹಿಂದೆ ಅಮೆರಿಕದ ಈಜುಗಾರ ರೆಗಾನ್ ಸ್ಮಿತ್ ಇದೇ ಗುರಿಯನ್ನು 2019ರಲ್ಲಿ 57.57 ಸೆಕೆಂಡುಗಳಲ್ಲಿ ತಲುಪಿದ್ದರು.
ತನ್ನ ಸಾಧನೆಯ ಬಗ್ಗೆ ಮಾತನಾಡಿದ ಮೆಕಾನ್, ಹತ್ತು ತಿಂಗಳ ಹಿಂದೆ ನನ್ನ ತಂದೆ ಕೋವಿಡ್‌ನಿಂದ ಪ್ರಾಣ ಕಳೆದುಕೊಂಡರು. ಅವರು ನನಗೆ ನೀಡಿದ ಪ್ರೇರಣೆಯೇ ಈ ಸಾಧನೆಗೆ ಮೂಲ ಕಾರಣವಾಯ್ತು. ಇದಾದ ಬಳಿಕ ಸಾಧನೆಯ ತುಡಿತ ನನ್ನನ್ನು ಈ ಹಂತಕ್ಕೆ ತಲುಪಿಸಿತು. ಪ್ರತಿದಿನ ಬೆಳಗಾಗುತ್ತಲೇ ಸಾಧನೆಯ ಹಸಿವು, ನನ್ನೊಳಗಿನ ಸ್ವಯಂಪ್ರೇರಣೆ ಹಾಗೂ ಕಠಿಣ ಪರಿಶ್ರಮವೇ ಇದಕ್ಕೆಲ್ಲ ಕಾರಣ ಎಂದು ಭಾವುಕರಾದರು.