ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಟೆನಿಸ್ನ ಮಿಶ್ರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಭಾರತದ ಟೆನಿಸ್ ತಾರೆಯರಾದ ರೋಹನ್ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಸೋತು ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟರು. ಬ್ರೆಜಿಲ್‌ನ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮಾಟೋಸ್ ವಿರುದ್ಧ 6-7, 2-6 ನೇರ ಸೆಟ್ಗಳಲ್ಲಿ ಭಾರತದ ಜೋಡಿ ಪರಾಭವಗೊಂಡಿತು. ಸಾನಿಯಾ ಮಿರ್ಜಾರ ಕೊನೆಯ ಗ್ರಾನ್ಸ್ಲಾಂ ಪಂದ್ಯ ಕೂಡ ಇದಾಗಿತ್ತು.
14 ವರ್ಷಗಳಿಂದ ಮಿಶ್ರ ಡಬಲ್ಸ್ನಲ್ಲಿ ಒಟ್ಟಾಗಿ ಆಡುತ್ತಿದ್ದ ಜೋಡಿಯನ್ನು ಚಿಯರ್ ಮಾಡಲು ಅವರವರ ಕುಟುಂಬಸ್ಥರು ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಸಾನಿಯಾರ ಪುತ್ರ ಇಜಾನ್ ಮತ್ತು ಕುಟುಂಬಸ್ಥರು ಬಂದಿದ್ದರೆ, ಬೋಪಣ್ಣ ಅವರ ಪತ್ನಿ, ಮಕ್ಕಳು ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡರು. ವಿಷಯ ಇಷ್ಟೇ ಅಲ್ಲ, ಅಭಿಮಾನಿಯೊಬ್ಬಾಕೆ ಚಿಯರ್ ಮಾಡುತ್ತಿರುವ ಬೋಪಣ್ಣ ಅವರ ಪತ್ನಿಯ ಫೋಟೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡು, "ನಾನು ಕಂಡ ಅತ್ಯಂತ ಸುಂದರ ಮಹಿಳೆ" ಎಂಬ ಒಕ್ಕಣೆ ಬರೆದಿದ್ದಾರೆ. ಇದು ವೈರಲ್ ಆಗುತ್ತಿದೆ.
ಇದಕ್ಕೆ ತರಹೇವಾರಿ ಕಮೆಂಟ್ಗಳು ಬರುತ್ತಿದ್ದು, ಬೋಪಣ್ಣ ಅವರ ಸುಂದರ ಪತ್ನಿಯನ್ನು ಹೊಗಳುತ್ತಿದ್ದಾರೆ. ಇದಲ್ಲದೇ, ಸ್ವತಃ ರೋಹನ್ ಬೋಪಣ್ಣ ಅವರೇ ಅಭಿಮಾನಿಯ ಟ್ವೀಟ್ ಅನ್ನು ರೀಟ್ವೀಟ್ ಮಾಡಿ "ನಾನಿದನ್ನು ಒಪ್ಪುತ್ತೇನೆ" ಎಂದಿದ್ದಾರೆ.
ಕಣ್ಣೀರಿನೊಂದಿಗೆ ಸಾನಿಯಾ ವಿದಾಯ:ಮೆಲ್ಬೋರ್ನ್ ಪಾರ್ಕ್ನಲ್ಲಿ ನಡೆದ ಮಿಶ್ರ ಡಬಲ್ಸ್ನ ಫೈನಲ್ ಪಂದ್ಯ ಸಾನಿಯಾ ಮಿರ್ಜಾರ ಕೊನೆಯ ಗ್ರಾನ್ಸ್ಲಾಂ ಪಂದ್ಯವಾಗಿದೆ. ಮುಂದಿನ ತಿಂಗಳು ನಡೆಯುವ ದುಬೈ ಟೆನಿಸ್ ಟೂರ್ನಿ ಬಳಿಕ ಅವರು ಸಂಪೂರ್ಣವಾಗಿ ಟೆನಿಸ್ನಿಂದ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಮೂಗುತಿ ಸುಂದರಿ, "ಇದು ಸಂತೋಷದ ಕಣ್ಣೀರು. ವೃತ್ತಿ ಜೀವನದ ಗ್ರಾನ್ಸ್ಲಾಂ ಪಂದ್ಯಗಳಲ್ಲಿ ಇನ್ನು ಮುಂದೆ ನಾನು ಕಣಕ್ಕಿಳಿಯುವುದಿಲ್ಲ. ಮೆಲ್ಬೋರ್ನ್ನಲ್ಲಿ ಆರಂಭವಾದ ಆಟ ಇಲ್ಲೇ ಮುಗಿಯುತ್ತಿದೆ" ಎಂದು ಭಾವುಕರಾಗಿದ್ದರು.
"14 ವರ್ಷದವಳಾಗಿದ್ದಾಗ ರೋಹನ್ ನನ್ನ ಮೊದಲ ಮಿಶ್ರ ಡಬಲ್ಸ್ ಪಾಲುದಾರನಾಗಿದ್ದರು. ನಾವಿಬ್ಬರು ಹಲವು ರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿದ್ದೇವೆ. 22 ವರ್ಷಗಳಿಂದ ಒಟ್ಟಾಗಿದ್ದೇವೆ. ಆತ ನನ್ನ ಅತ್ಯುತ್ತಮ ಸ್ನೇಹಿತ ಮತ್ತು ನನ್ನ ವೃತ್ತಿಜೀವನವನ್ನು ಮುಗಿಸಲು ನನ್ನ ಅತ್ಯುತ್ತಮ ಪಾಲುದಾರರಲ್ಲಿ ಒಬ್ಬರಾಗಿದ್ದಾರೆ" ಎಂದು ಸಾನಿಯಾ ಹೇಳಿದ್ದಾರೆ. ಇದೇ ವೇಳೆ ಬೋಪಣ್ಣ ಜೊತೆಗೂಡಿ ಫ್ರೆಂಚ್ ಓಪನ್ ಮಿಶ್ರ ಡಬಲ್ಸ್ ಪ್ರಶಸ್ತಿ ಗೆದ್ದಿದ್ದನ್ನು ನೆನಪಿಸಿಕೊಂಡರು.
ಸಾನಿಯಾ ಮಿರ್ಜಾ 2009 ರ ಆಸ್ಟ್ರೇಲಿಯನ್ ಓಪನ್ ಮತ್ತು 2012 ರ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮಹೇಶ್ ಭೂಪತಿ ಮತ್ತು 2014 ರ ಅಮೆರಿಕ ಓಪನ್ ಅನ್ನು ಬ್ರೆಜಿಲಿಯಾದ ಬ್ರೂನೋ ಸೋರೆಸ್ ಜೊತೆಗೂಡಿ ಮಿಶ್ರ ಡಬಲ್ಸ್ ಪ್ರಶಸ್ತಿ ಜಯಿಸಿದ್ದಾರೆ.
ಇದನ್ನೂ ಓದಿ:ವೃತ್ತಿ ಜೀವನದ ಕೊನೆಯ ಗ್ರ್ಯಾಂಡ್ ಸ್ಲಾಮ್ನಲ್ಲಿ ಸಾನಿಯಾ ಜೋಡಿಗೆ ಸೋಲು: ಕಣ್ಣೀರ ವಿದಾಯ