ಮೆಲ್ಬೋರ್ನ್ (ಆಸ್ಟ್ರೇಲಿಯಾ): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ತಮ್ಮ ಟೆನಿಸ್ ಗ್ರ್ಯಾನ್ ಸ್ಲಾಮ್ ಪಯಣವನ್ನು ಸೋಲಿನೊಂದಿಗೆ ಮುಗಿಸಿದರು. ಆಸ್ಟ್ರೇಲಿಯಾ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಸಾನಿಯಾ ಜೋಡಿ ಫೈನಲ್‌ನಲ್ಲಿ ಸೋಲನುಭವಿಸಿದೆ. ಪಂದ್ಯದ ನಂತರ ಮೂಗುತಿ ಸುಂದರಿ ಭಾವುಕರಾದರು. ತಮ್ಮ ವೃತ್ತಿ ಪ್ರಯಾಣದ ಬಗ್ಗೆ ಮಾತನಾಡುತ್ತಾ ಕಣ್ಣೀರಾದರು.
"ನನ್ನ ವೃತ್ತಿಪರ ವೃತ್ತಿಜೀವನವು ಮೆಲ್ಬೋರ್ನ್‌ನಲ್ಲಿ ಪ್ರಾರಂಭವಾಯಿತು. ಗ್ರ್ಯಾಂಡ್ ಸ್ಲಾಮ್ ವೃತ್ತಿಜೀವನವನ್ನು ಕೊನೆಗೊಳಿಸಲು ಇದಕ್ಕಿಂತ ಉತ್ತಮ ಸ್ಥಳವಿರದು. ಇದು ನನಗೆ ತುಂಬಾ ವಿಶೇಷವಾದ ಸ್ಥಳ. ನನ್ನ ಮಗ ನೋಡುತ್ತಿರುವಾಗಲೇ ನಾನು ಗ್ರ್ಯಾಂಡ್ ಸ್ಲಾಮ್ ಫೈನಲ್ ಪಂದ್ಯ ಆಡುತ್ತೇನೆ ಎಂದು ಊಹಿಸಿರಲಿಲ್ಲ" ಎಂದರು. ಈ ವಿಡಿಯೋವನ್ನು ಆಸ್ಟ್ರೇಲಿಯ ಓಪನ್ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
36 ವರ್ಷದ ಸಾನಿಯಾ ಮಿರ್ಜಾ ಇತ್ತೀಚೆಗೆ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು. ಆಸ್ಟ್ರೇಲಿಯನ್ ಓಪನ್ ಮತ್ತು ದುಬೈ ಓಪನ್ ನಂತರ ಆಟಕ್ಕೆ ವಿದಾಯ ಹೇಳುವುದಾಗಿ ತಿಳಿಸಿದ್ದರು. ಆಸ್ಟ್ರೇಲಿಯಾ ಓಪನ್ ಟೂರ್ನಿಯಲ್ಲಿ ಸಾನಿಯಾ ಮಹಿಳೆಯರ ಡಬಲ್ಸ್ ಮತ್ತು ಮಿಶ್ರ ಡಬಲ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದರು.
ಇದನ್ನೂ ಓದಿ:ಸೂರ್ಯಗೆ ವರ್ಷದ ಟಿ20 ಕ್ರಿಕೆಟಿಗ ಪ್ರಶಸ್ತಿ, ರೇಣುಕಾ ಉದಯೋನ್ಮುಖ ಆಟಗಾರ್ತಿ, ಬಾಬರ್ಗೆ ಎರಡು ಗೌರವ
ಮಹಿಳೆಯರ ಡಬಲ್ಸ್‌ನಲ್ಲಿ ನಿರಾಸೆ ಮೂಡಿಸಿದರೂ ಸಹ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಮತ್ತೊಬ್ಬ ಆಟಗಾರ ರೋಹನ್ ಬೋಪಣ್ಣ ಅವರೊಂದಿಗೆ ಅವರು ಫೈನಲ್ ತಲುಪಿದ್ದರು. ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಸಾನಿಯಾ-ಬೋಪಣ್ಣ ಜೋಡಿ 6-7, 2-6ರಲ್ಲಿ ಬ್ರೆಜಿಲ್‌ನ ಸ್ಟೆಫನಿ-ರಾಫೆಲೊ ಜೋಡಿಯೆದುರು ಪರಾಭವಗೊಂಡರು. ಇದರೊಂದಿಗೆ ಸಾನಿಯಾ ಗ್ರ್ಯಾನ್ ಸ್ಲಾಮ್ ವೃತ್ತಿಜೀವನ ಕೊನೆಗುಳಿಸಿದರು. ಸಾನಿಯಾ ಮುಂದಿನ ತಿಂಗಳು ದುಬೈ ಓಪನ್‌ನಲ್ಲಿ ತಮ್ಮ ವೃತ್ತಿ ಜೀವನದ ಕೊನೆಯ ಟೂರ್ನಿ ಆಡಲಿದ್ದಾರೆ.
6 ಬಾರಿಯ ಗ್ರ್ಯಾಂಡ್ ಸ್ಲಾಮ್ ಒಡತಿ ಸಾನಿಯಾ ಎರಡು ಬಾರಿ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದಾರೆ. 2009 ರಲ್ಲಿ ಇದೇ ಮೈದಾನದಲ್ಲಿ ಮಿಶ್ರ ಡಬಲ್ಸ್ ಪ್ರಶಸ್ತಿ ಮತ್ತು 2016 ರಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಸಾನಿಯಾ ಈವರೆಗೆ ಒಟ್ಟು 43 ಡಬಲ್ಸ್ ಪ್ರಶಸ್ತಿ ಗೆದ್ದಿದ್ದಾರೆ. ಮಹಿಳೆಯರ ಡಬಲ್ಸ್ ವಿಭಾಗದಲ್ಲಿ 91 ವಾರಗಳ ಕಾಲ ನಂಬರ್ 1 ಆಟಗಾರ್ತಿಯಾಗಿರುವುದು ಗಮನಾರ್ಹ.
ಇದನ್ನೂ ಓದಿ:ಫೆಬ್ರವರಿ 24 ರಿಂದ ಕೆಸಿಸಿ ಟೂರ್ನಿ ಆರಂಭ: ಸ್ಯಾಂಡಲ್ವುಡ್ ಸ್ಟಾರ್ಸ್‌ಗೆ ಕ್ರಿಕೆಟ್ ಹಬ್ಬ