ಲಂಡನ್(ಯುಕೆ): ಟೆನಿಸ್‌ಗೆ ಪರ್ಯಾಯ ಹೆಸರೇ ನೊವಾಕ್ ಜೊಕೊವಿಚ್. ಏಕೆಂದರೆ ಈ ವರ್ಷಾಂತ್ಯದ ಎಟಿಪಿ ಶ್ರೇಯಾಂಕದಲ್ಲಿ 8ನೇ ಬಾರಿಗೆ ನಂ.1 ಸ್ಥಾನವನ್ನು ಅವರು ತನ್ನಲ್ಲೇ ಉಳಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಟ್ಟವೂ ನೊವಾಕ್ ಹೆಸರಿನಲ್ಲಿದೆ.
ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್, ಜೂನ್‌ನಲ್ಲಿ ಫ್ರೆಂಚ್ ಓಪನ್ ಮತ್ತು ಜುಲೈನಲ್ಲಿ ಯುಎಸ್ ಓಪನ್ ಸೇರಿದಂತೆ ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್ ಪಂದ್ಯಾವಳಿಗಳ ಪೈಕಿ ಜೊಕೊವಿಚ್ ಮೂರನ್ನು ಗೆದ್ದಿದ್ದಾರೆ. ಸೆಪ್ಟೆಂಬರ್‌ನಲ್ಲಿ ಯುಎಸ್ ಓಪನ್ ಗೆದ್ದು ತಮ್ಮ ವೃತ್ತಿಜೀವನದ 24ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಸ್ವೀಕರಿಸಿದ್ದರು. ಇದು ಪುರುಷರ ವಿಭಾಗದಲ್ಲಿ ಅತಿ ಹೆಚ್ಚು ಓಪನ್ ಪ್ರಶಸ್ತಿ ಗೆದ್ದ ದಾಖಲೆಯೂ ಹೌದು. ಇದರ ಜೊತೆಗೆ ವಿಂಬಲ್ಡನ್‌ನಲ್ಲಿ ಎರಡನೇ ಸ್ಥಾನ ಪಡೆದಿದ್ದರು.
36 ವರ್ಷದ ಅನುಭವಿ ನೊವಾಕ್, ಈ ವರ್ಷದ ಪ್ರವಾಸದಲ್ಲಿ ಯುವ ಆಟಗಾರ ಕಾರ್ಲೋಸ್ ಅಲ್ಕರಾಜ್ ಜೊತೆಗೆ ಅಗ್ರಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಲೇ ಬಂದರು. ಜುಲೈನಲ್ಲಿ ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಡೆದ ಐದು ಸೆಟ್‌ಗಳ ಫೈನಲ್‌ನಲ್ಲಿ ಜೊಕೊವಿಚ್ ಅವರು ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿ ನಂ.1 ಸ್ಥಾನಕ್ಕೆ ಮರಳಿದ್ದರು. ಅಲ್ಕಾರಾಜ್ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನದಲ್ಲಿದ್ದಾರೆ. 2021ರಲ್ಲಿ ವರ್ಷಾಂತ್ಯಕ್ಕೆ ನೊವಾಕ್ ಅಗ್ರಸ್ಥಾನ ಪಡೆದಿದ್ದರು. ಎರಡು ವರ್ಷದ ನಂತರ ಮತ್ತೆ ಅದೇ ಸ್ಥಾನವನ್ನು ಅವರು ಅಲಂಕರಿಸಿದ್ದಾರೆ. 2024 ಜನವರಿ 22ರವರೆಗೆ ಅಗ್ರ ಶ್ರೇಯಾಂಕಿತರಾಗಿಯೇ ಉಳಿಯಲಿದ್ದಾರೆ.
ಈ ಹಿಂದೆ ಪೀಟ್ ಸಾಂಪ್ರಾಸ್ 6 ಬಾರಿ ವರ್ಷಾಂತ್ಯಕ್ಕೆ ನಂ.1 ಸ್ಥಾನ ಅಲಂಕರಿಸಿದ್ದೊಂದು ದಾಖಲೆ. ಇದೀಗ ನೊವಾನ್ ಈ ದಾಖಲೆಯನ್ನು ಮೀರಿಸಿದ್ದಾರೆ. ಜಿಮ್ಮಿ ಕಾನರ್ಸ್, ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ತಲಾ ಐದು ಬಾರಿ ನಂ.1 ಸ್ಥಾನ ಪಡೆದಿದ್ದರು.