ನವದೆಹಲಿ :ಕೋವಿಡ್-19 ಭಯವಿಲ್ಲದೆ ಕ್ರೀಡಾಪಟುಗಳು ತರಬೇತಿಯಲ್ಲಿ ಪಾಲ್ಗೊಳ್ಳಲು ನೆರವಾಗಲು ಇಂಡಿಯನ್ ಒಲಿಂಪಿಕ್ಸ್ ಅಸೋಸಿಯೇಷನ್ ಬ್ಯಾಟರಿ ಚಾಲಿತ ಮಾಸ್ಕ್ಗಳ ಸೌಲಭ್ಯ ಒದಗಿಸಲು ಮುಂದಾಗಿದೆ.
ಕೋವಿಡ್-19 ಅನ್ಲಾಕ್ ಘೋಷಣೆಗಳಾಗುತ್ತಿದ್ದಂತೆಯೇ ಭಾರತ ಕ್ರೀಡಾ ಸಚಿವಾಲಯ ಎಲ್ಲಾ ಕ್ರೀಡೆಗಳಿಗೂ ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್(SOP) ಮೂಲಕ ನಿಧಾನವಾಗಿ ತರಬೇತಿ ಆರಂಭಿಸಲು ಅನುವು ಮಾಡಿಕೊಡುತ್ತಿದೆ. ಆದರೆ, ಕೊರೊನಾ ಸಾಂಕ್ರಾಮಿಕ ಹಾವಳಿ ತಪ್ಪಿಸಿಕೊಳ್ಳಲು ಮಾಸ್ಕರ್ ಕಡ್ಡಾಯ ಮಾಡಿದೆ. ಇದರಿಂದ ಕೆಲವರಿಗೆ ಉಸಿರಾಟದ ತೊಂದರೆಯಾಗಬಹುದೆಂಬ ಆಲೋಚನೆಯಿಂದ ಒಲಿಂಪಿಕ್ಸ್ ಬೌಂಡ್ ಅಥ್ಲೀಟ್ಗಳಿಗೆ ಬ್ಯಾಟರಿ ಚಾಲಿತ ಮಾಸ್ಕ್ಗಳನ್ನು ತೊಟ್ಟು ತರಬೇತಿ ನಡೆಸಲು ಅವಕಾಶ ಮಾಡಿಕೊಡಲು ನಿರ್ಧರಿಸಿದೆ.
ಈ ಮಾಸ್ಕ್ ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು ಎರಡು ಫ್ಯಾನ್ಗಳು ಮತ್ತು ಎನ್95 ಫಿಲ್ಟರ್ ಹೊಂದಿರುತ್ತದೆ ಎಂದು ಭಾರತೀಯ ಒಲಿಂಪಿಕ್ಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಹೇಳಿದ್ದಾರೆ.
ಈ ಮಾಸ್ಕ್ಗಳನ್ನು ಕೆಲವು ಕ್ರೀಡಾಪಟುಗಳಿಗೆ ಪ್ರಾಯೋಗಿಕ ಆಧಾರದ ಮೇಲೆ ನೀಡಲು ಆಲೋಚಿಸಿದ್ದು, ಅದರು ಸರಿಯಾಗಿ ಕೆಲಸ ಮಾಡಿದ್ರೆ ಮತ್ತು ಅದರ ಫಲಿತಾಂಶ ತೃಪ್ತಿಕರವಾದ್ರೆ ನಾವು ಅದನ್ನು ಒಲಿಂಪಿಕ್ ಬೌಂಡ್ ಕ್ರೀಡಾಪಡುಗಳಿಗೆ ತರಬೇತಿ ಅವಧಿಯಲ್ಲಿ ನೀಡುತ್ತೇವೆ ಎಂದು ಮೆಹ್ತಾ ತಿಳಿಸಿದ್ದಾರೆ.
ಭಾರತದಲ್ಲಿ ಕೋವಿಡ್-19ರ ಪರಿಸ್ಥಿತಿಯಲ್ಲಿ ಕ್ರೀಡಾಪಟುಗಳು ತರಬೇತಿಯನ್ನು ಪುನಾರಂಭಿಸುವುದಕ್ಕೆ ಪರಿಸ್ಥಿತಿ ಸರಿಯಿಲ್ಲ. ಆದರೆ, ಹಲವಾರು ಫೆಡರೇಷನ್‌ಗಳಿಂದ ಮನವಿಗಳನ್ನು ಸ್ವೀಕರಿಸಿದ ನಂತರ, ಕ್ರೀಡಾಪಟುಗಳಿಗೆ ತರಬೇತಿ ಪುನಾರಂಭಿಸಲು ಏನಾದ್ರೂ ಮಾಡಲು ನಿರ್ಧರಿಸಬೇಕಾಗಿದೆ ಎಂದಿದ್ದಾರೆ.
ಬ್ಯಾಟರಿ ಚಾಲಿತ ಮಾಸ್ಕ್ ಒಂದರ ಬೆಲೆ 2,200 ರೂ. ಆಗಿದೆ. ಅಕ್ಟೋಬರ್ 2ರೊಳಗೆ ತರಬೇತಿಗೆ ಬರುವ ಕ್ರೀಡಾಪಟುಗಳಿಗೆ ಈ ಮಾಸ್ಕ್ಗಳನ್ನು ನೀಡಲಾಗುವುದು ಎಂದು ಮೆಹ್ತಾ ಭರವಸೆ ನೀಡಿದ್ದಾರೆ. ಮೊದಲು ಪ್ರಾಯೋಗಿಕವಾಗಿ ಕೆಲವು ಕ್ರೀಡಾಪಟುಗಳಿಗೆ 20 ಮಾಸ್ಕ್ಗಳನ್ನು ನೀಡಿ ಪರೀಕ್ಷಿಸಲಾಗುವುದು ಎಂದಿದ್ದಾರೆ.
ಕ್ರೀಡಾಪಟುಗಳು ಈ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ ಎದುರಾಗುವುದಿಲ್ಲ. ಈ ಬ್ಯಾಟರಿ ಚಾಲಿತ ಮಾಸ್ಕ್ ಹೆಚ್ಚಿನ ಆಮ್ಲಜನಕದ ಪೂರೈಕೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಐಐಟಿ-ಖರಗ್‌ಪುರದ ಹಳೆ ವಿದ್ಯಾರ್ಥಿಗಳು ಈ ಮಾಸ್ಕ್ ಸಿದ್ಧಪಡಿಸಿದ್ದು, ಇದಕ್ಕೆ 'ಮೋಕ್ಷಾ' ಎಂದು ಹೆಸರಿಡಲಾಗಿದೆ.