ಸಹರಾನ್‌ಪುರ, ಉತ್ತರ ಪ್ರದೇಶ:ಊಟ ಡೈನಿಂಗ್ ಹಾಲ್ನಲ್ಲಿ, ಮೂತ್ರ ಶೌಚಾಲಯದಲ್ಲಿ ಮಾಡಬೇಕು. ಇದನ್ನು ಮರೆತ ಮೂರ್ಖ ಕ್ರೀಡಾ ಅಧಿಕಾರಿ ಅಮಾನತು ಶಿಕ್ಷೆಗೆ ಒಳಗಾಗಿದ್ದಾನೆ. ಉತ್ತರಪ್ರದೇಶದ ಸಹರಾನ್‌ಪುರ ಜಿಲ್ಲೆಯ ಕ್ರೀಡಾಧಿಕಾರಿ ಮಹಿಳಾ ಕಬ್ಬಡ್ಡಿ ಆಟಗಾರರಿಗೆ ಶೌಚಾಲಯದೊಳಗೆ ಆಹಾರ ಉಣಬಡಿಸಿದ ಕಾರಣಕ್ಕಾಗಿ ಸರ್ಕಾರ ಆತನನ್ನು ಅಮಾನತು ಮಾಡಿದೆ.
ಉತ್ತರಪ್ರದೇಶದ ಸಹರಾನ್ಪುರದಲ್ಲಿ ಜಿಲ್ಲಾಮಟ್ಟದ ಕಬ್ಬಡ್ಡಿ ಪಂದ್ಯಾವಳಿ ಆಯೋಜಿಸಲಾಗಿತ್ತು. ರಾಜ್ಯದ 17 ವಿಭಾಗಗಳಿಂದ ತಂಡಗಳಿಂದ, 300 ಆಟಗಾರ್ತಿಯರು ಭಾಗವಹಿಸಿದ್ದರು. ಕ್ರೀಡಾಪಟುಗಳಿಗೆ ಇಲಾಖೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಗುತ್ತಿಗೆ ಕೂಡ ನೀಡಲಾಗಿದೆ.
ಆಟಗಾರ್ತಿಯರಿಗೆ ನೀಡಬೇಕಾದ ಆಹಾರವನ್ನು ಶೌಚಾಲಯದಲ್ಲಿಟ್ಟು ಬಡಿಸಲಾಗಿದೆ. ಆಟಗಾರ್ತಿಯರು ಶೌಚಾಲಯದಲ್ಲಿದ್ದ ಊಟವನ್ನು ತಟ್ಟೆಗೆ ಬಡಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ಬಗ್ಗೆ ಭಾರಿ ಟೀಕೆ ವ್ಯಕ್ತವಾಗಿದೆ.
ಶೌಚ ಮಾಡುವ ಜಾಗದಲ್ಲಿ ಆಹಾರ ಇಟ್ಟ ಅಧಿಕಾರಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಅಸಹಾಯಕ ಆಟಗಾರ್ತಿಯರು ಅದೇ ಊಟವನ್ನು ಶೌಚಾಲಯದಿಂದಲೇ ಬಡಿಸಿಕೊಂಡು ತಿಂದಿದ್ದಾರೆ. ಈ ಅಸಹ್ಯಕರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಕ್ರೀಡಾ ಅಧಿಕಾರಿ ಅನಿಮೇಶ್ ಸಕ್ಸೇನಾ ಎಂಬಾತನನ್ನು ರಾಜ್ಯ ಸರ್ಕಾರ ಅಮಾನತು ಮಾಡಿದೆ.
ತನಿಖೆಗೆ ಆದೇಶಿಸಿದ ಕೇಂದ್ರ ಕ್ರೀಡಾ ಸಚಿವ:ಘಟನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಅನುರಾಗ್ ಠಾಕೂರ್ ಅವರು ತನಿಖೆಗೆ ಆದೇಶಿಸಿದ್ದಾರೆ. ಆರೋಪಿ ಗುತ್ತಿಗೆದಾರ ಹಾಗೂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ಮುಂದಿನ ಕ್ರೀಡಾ ಕಾರ್ಯಕ್ರಮಗಳಲ್ಲಿ ಆಹಾರ ಪೂರೈಸದಂತೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸುವಂತೆ ನಿರ್ದೇಶಿಸಿದ್ದಾರೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು ಎಂದು ಅನುರಾಗ್ ಠಾಕೂರ್ ಹೇಳಿದರು.
ಇನ್ನು ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕ್ರೀಡಾಪಟುಗಳನ್ನು ಅಸಹ್ಯವಾಗಿ ನಡೆಸಿಕೊಳ್ಳಲಾಗಿದೆ ಎಂದು ಟೀಕಿಸಿದೆ. ಕ್ರೀಡಾ ಆಯೋಜನೆಯ ಬಗ್ಗೆ ಕೋಟಿಗಟ್ಟಲೇ ಹಣ ಖರ್ಚು ಮಾಡಿರುವ ಸರ್ಕಾರ, ಕ್ರೀಡಾಪಟುಗಳಿಗೆ ಉತ್ತಮ ಊಟದ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಇದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದೆ.
ಓದಿ:ಪ್ರತಿ ಬಾರಿ 200ರ ಸ್ಟ್ರೈಕ್ರೇಟಲ್ಲಿ ಆಡಲಾಗದು.. ಬ್ಯಾಟಿಂಗ್ ಸರಾಸರಿ ಟೀಕೆಗೆ ಕೆಎಲ್ ರಾಹುಲ್ ಉತ್ತರ