ಇಂಡೋನೇಷಿಯಾ:ಫುಟ್ಬಾಲ್ ಪಂದ್ಯದಲ್ಲಿ ಸೋತಿದ್ದಕ್ಕೆ ಅಭಿಮಾನಿಗಳ ಮಧ್ಯೆ ನಡೆದ ಕಾದಾಟದಲ್ಲಿ 174 ಮಂದಿ ಮೃತಪಟ್ಟು, 150 ಕ್ಕೂ ಅಧಿಕ ಜನರು ಗಾಯಗೊಂಡ ಭೀಕರ ಘಟನೆ ಇಂಡೋನೇಷ್ಯಾದಲ್ಲಿ ಶನಿವಾರ ರಾತ್ರಿ ನಡೆದಿದೆ. ಪೂರ್ವ ಜಾವಾದ ಕಂಜುರುಹಾನ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಬಿಆರ್ಐ ಲಿಗಾ 1 ಫುಟ್ಬಾಲ್ ಪಂದ್ಯದ ವೇಳೆ ಈ ಹಿಂಸಾಚಾರ ಸಂಭವಿಸಿದೆ.
ಅರೆಮಾ ಎಫ್‌ಸಿ ಮತ್ತು ಪರ್ಸೆಬಯಾ ಸುರಬಯಾ ನಡುವೆ ಪಂದ್ಯ ನಡೆದಿದೆ. ಇದರಲ್ಲಿ ಅರೆಮಾ ಎಫ್‌ಸಿ ತಂಡ ಸೋಲು ಅನುಭವಿಸಿದೆ. ಇದರಿಂದ ರೊಚ್ಚಿಗೆದ್ದ ಸಾವಿರಾರು ಅಭಿಮಾನಿಗಳು ಪರಸ್ಪರ ಕಿತ್ತಾಡಿಕೊಂಡು, ಮೈದಾನಕ್ಕೂ ನುಗ್ಗಿ ದಾಂಧಲೆ ಎಬ್ಬಿಸಿದ್ದಾರೆ. ಇದನ್ನು ತಡೆಯಲು ಪೊಲೀಸರು ಅಶ್ರುವಾಯು, ರಬ್ಬರ್ ಬುಲೆಟ್, ಲಾಠಿ ಚಾರ್ಜ್ ಮಾಡಿದ್ದಾರೆ.
ಅಭಿಮಾನಿಗಳ ಮಧ್ಯೆ ನಡೆದ ಹೊಡೆದಾಟದಲ್ಲಿ 174 ಜನರು ಮೃತಪಟ್ಟಿದ್ದು, ಇದರಲ್ಲಿ ಇಬ್ಬರು ಪೊಲೀಸರೂ ಇದ್ದಾರೆ. 34 ಜನರು ಕ್ರೀಡಾಂಗಣದಲ್ಲೇ ಕೊಲ್ಲಲ್ಪಟ್ಟರೆ, ಉಳಿದವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದಾರೆ. ಅಭಿಮಾನಿಗಳ ನಡುವಿನ ಹಿಂಸಾಚಾರ ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದರು ಎಂದು ಅಲ್ಲಿನ ಸರ್ಕಾರ ತಿಳಿಸಿದೆ.
ಫುಟ್ಬಾಲ್ ಅಭಿಮಾನಿಗಳು ಸೋತ ಕಿಚ್ಚಿನಿಂದ ಮೈದಾನದಲ್ಲಿ ಹೊಡೆದಾಡಿಕೊಳ್ಳುತ್ತಿರುವ ಮತ್ತು ಗುಂಡು ಹಾರಿಸುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅರೆಮಾ ಎಫ್‌ಸಿ ತಂಡದ ಅಭಿಮಾನಿಗಳ ದಾಂಧಲೆಗೆ ನೂರಾರು ನೂರಾರು ಪ್ರಾಣ ಕಳೆದುಕೊಂಡಿದ್ದಾರೆ. ತಕ್ಷಣವೇ ಜಾರಿಗೆ ಬರುವಂತೆ ತಂಡವನ್ನು ನಿಷೇಧಿಸಲಾಗಿದೆ. ಅಲ್ಲದೇ ಟೂರ್ನಿಯನ್ನು ಒಂದು ವಾರ ಮುಂದೂಡಲಾಗಿದೆ. ಘಟನೆ ಸಂಬಂಧ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ.
ಓದಿ:ICC ODI and T20 rankings: ಭಾರತ ವನಿತೆಯರ ತಂಡ ಏಕದಿನ, ಚುಟುಕು ಕ್ರಿಕೆಟ್ನಲ್ಲಿ 4ನೇ ಸ್ಥಾನದಲ್ಲಿ ಭದ್ರ