ಗುವಾಹಟಿ (ಅಸ್ಸೋಂ):ಭಾರತದ ಸ್ಟಾರ್ ಓಟಗಾರ್ತಿ ಹಿಮಾ ದಾಸ್ ಅವರನ್ನು ರಾಜ್ಯದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿಎಸ್ಪಿ)ಯಾಗಿ ನೇಮಕ ಮಾಡಲು ಮುಖ್ಯಮಂತ್ರಿ ಸರ್ಬಾನಂದ್ ಸೋನಾವಾಲ್ ನಿರ್ಧರಿಸಿದ್ದಾರೆ
ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಒಂದು ಮತ್ತು ಎರಡನೇ ಶ್ರೇಣಿಯ ಅಧಿಕಾರಿಗಳಾಗಿ ಕ್ರೀಡಾಪಟುಗಳನ್ನು ನೇಮಕ ಮಾಡಲು ರಾಜ್ಯದ ಸಮಗ್ರ ಕ್ರೀಡಾ ನೀತಿಗೆ ಸಂಪುಟ ತಿದ್ದುಪಡಿ ಮಾಡಿದೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತರಿಗೆ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದ್ದು, ಸ್ಪ್ರಿಂಟರ್ ಹಿಮಾ ದಾಸ್ರನ್ನು ಡಿಎಸ್ಪಿಯಾಗಿ ನೇಮಕ ಮಾಡಲು ಸಂಪುಟ ಸಚಿವರು ಅನುಮೋದನೆ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಕ್ರೀಡಾ ಸಚಿವ ಕಿರೆನ್ ರಿಜಿಜು, ಸ್ಪ್ರಿಂಟರ್ ಕ್ವೀನ್ ಹಿಮಾ ದಾಸ್ರಿಗೆ ಡಿಎಸ್ಪಿ ಹುದ್ದೆ ನೀಡುವ ಸಂಪುಟದ ಈ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಐಎಎಎಫ್ ವರ್ಲ್ಡ್ ಅಂಡರ್ 20 (AAF World U20) ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಪಡೆದ ಅಸ್ಸೋಂನ ಧಿಂಗ್ ಗ್ರಾಮದ ಹಿಮಾ, ಜಾಗತಿಕ ಮಟ್ಟದ ಓಟದ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದ ಭಾರತೀಯ ಮಹಿಳೆ ಮತ್ತು ಮೊದಲ ಭಾರತೀಯ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಸತತವಾಗಿ ಐದು ಚಿನ್ನದ ಪದಕ ಮುಡಿಗೇರಿಸಿಕೊಂಡಿರುವ ಸಾಧನೆ ಕೂಡ ಇವರದ್ದಾಗಿದೆ. 2018ರಲ್ಲಿ ಹಿಮಾದಾಸ್ಗೆ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.