ಹ್ಯಾಂಗ್ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಭಾರತ ತನ್ನ ಪದಕ ಬೇಟೆಯನ್ನು ಮುಂದುವರೆಸಿದೆ. ಏಷ್ಯನ್ ಪ್ಯಾರಾ ಗೇಮ್ಸ್ನ ಎರಡನೇ ದಿನವಾದ ಮಂಗಳವಾರ ಭಾರತದ ಪ್ರಾಚಿ ಯಾದವ್ ಚಿನ್ನದ ಪದಕ ಪಡೆದಿದ್ದಾರೆ. ಮಹಿಳೆಯರ ಕೆಎಲ್2 ಕ್ಯಾನೋಯಿಂಗ್ ಸ್ಪರ್ಧೆಯಲ್ಲಿ ಪ್ರಾಚಿ ಚಿನ್ನದ ಪದಕ ಗೆದ್ದಿದ್ದು, ಪ್ಯಾರಾ ಏಷ್ಯನ್ ಗೇಮ್ಸ್ನ ನಾಲ್ಕನೇ ಆವೃತ್ತಿಯಲ್ಲಿ ಎರಡನೇ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಮೊದಲ ದಿನ ಬೆಳ್ಳಿ ಪದಕ ಪಡೆದಿದ್ದ ಪ್ರಾಚಿ :ಇದಕ್ಕೂ ಮುನ್ನ ಮೊದಲ ದಿನವಾದ ಸೋಮವಾರ ನಡೆದ ಮಹಿಳೆಯರ ಕ್ಯಾನೋಯಿಂಗ್ ವಿಎಲ್ 2 ವಿಭಾಗದಲ್ಲಿ ಪ್ರಾಚಿ ಯಾದವ್ ಬೆಳ್ಳಿ ಪದಕ ಗೆದ್ದಿದ್ದರು. ಮೊದಲ ದಿನ ಉಜ್ಬೇಕಿಸ್ಥಾನದ ಇರೋದಖೋನ್ ರುಸ್ತಮೋವ ಜೊತೆ ಪ್ರಬಲ ಹೋರಾಟ ನಡೆಸಿದ ಅವರು ಅಂತಿಮ ಕ್ಷಣದಲ್ಲಿ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಾಯಿತು. ಪ್ರಾಚಿ ಕೇವಲ 1.022 ಸೆಕೆಂಡ್ಗಳಲ್ಲಿ ಚಿನ್ನದ ಪದಕದಿಂದ ವಂಚಿತರಾಗಿದ್ದರು.
ಇದೀಗ ಮಂಗಳವಾರ ನಡೆದ ಮಹಿಳೆಯರ ಕೆಎಲ್2 ಕ್ಯಾನೋಯಿಂಗ್ ಸ್ಪರ್ಧೆಯಲ್ಲಿ ಪ್ರಾಚಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಪ್ರಾಚಿ 54.962 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಚಿನ್ನದ ಪದಕ ಪಡೆದರು. ಚೀನಾದ ಶಂಶಾನ್ ವಾಂಗ್ 55.674 ಸೆಕೆಂಡ್ಗಳಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಪಡೆದರು. ಇರಾನ್ನ ರೊಯಾ ಸೋಲ್ಟಾನಿ 56.714 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಕಂಚಿನ ಪದಕ ಪಡೆದರು. ಜೊತೆಗೆ ರಜನಿ ಝಾ12.190 ಸೆಕೆಂಡ್ಗಳಲ್ಲಿ ಗುರಿ ತಲುಪುವ ಮೂಲಕ ಐದನೇ ಸ್ಥಾನ ಪಡೆದರು. ಒಟ್ಟು ಆರು ಮಂದಿ ಅಥ್ಲೀಟ್ಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.