ನವದೆಹಲಿ: ಭಾರತದ ಭರವಸೆಯ ಕುಸ್ತಿಪಟುವಾದ ರವಿಕುಮಾರ್ ಏಷ್ಯನ್ ಕುಸ್ತಿ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಪಡೆದರೆ, ಭಜರಂಗ್ ಪೂನಿಯಾ ಸಹಿತ ಮೂವರು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟಿದ್ದಾರೆ.
ಇಂದು ನಡೆದ 57 ಕೆಜಿ ವಿಭಾಗದ ಫೈನಲ್ನಲ್ಲಿ ರವಿಕುಮಾರ್ ದಹಿಯಾ ತಜಕಿಸ್ತಾನದ ಹಿಕ್ಮತುಲೊ ವೊಹಿಡೋವ್ ವಿರುದ್ಧ 10-0 ಅಂತರದಲ್ಲಿ ಜಯ ಸಾಧಿಸಿ ಭಾರತಕ್ಕೆ ಈ ಟೂರ್ನಿಯಲ್ಲಿ 5ನೇ ಚಿನ್ನದ ಪದಕ ತಂದುಕೊಟ್ಟರು. ರವಿಕುಮಾರ್ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲೂ ಕಂಚಿನ ಪದಕ ಪಡೆದಿದ್ದರು.
ಆದರೆ, ಭಾರತದ ಭರವಸೆಯ ಕುಸ್ತಿಪಟು ಭಜರಂಗ್ ಪೂನಿಯಾ 65 ಕೆಜಿ ವಿಭಾಗದ ಫೈನಲ್ನಲ್ಲಿ ವಿಶ್ವ ಚಾಂಪಿಯನ್ ಜಪಾನ್ನ ತಕುಟೊ ಒಟೊಗುರೊ ವಿರುದ್ಧ 2-10ರಲ್ಲಿ ಸೋಲು ಕಾಣುವ ಮೂಲಕ ನಿರಾಶೆ ಅನುಭವಿಸಿದರು. ಭಜರಂಗ್ ವಿಶ್ವ ಚಾಂಪಿಯನ್ಶಿಪ್ನ ಫೈನಲ್ನಲ್ಲೂ ಜಪಾನ್ ಆಟಗಾರನ ವಿರುದ್ಧ ಸೋಲು ಕಂಡಿದ್ದರು.
ಉಳಿದಂತೆ 79 ಕೆಜಿ ವಿಭಾಗದಲ್ಲಿ ಫೈನಲ್ ತಲುಪಿದ್ದ 18 ವರ್ಷದ ಗೌರವ್ ಬಲಿಯಾನ್ ಕಿರ್ಗಿಸ್ತಾನದ ಕುಸ್ತಿಪಟು ಅರ್ಸಲಾನ್ ಬುಡಜಪೊವ್ ವಿರುದ್ಧ, 97 ಕೆಜಿ ವಿಭಾಗದಲ್ಲಿ ಸತ್ಯವರ್ಥ್ ಕಡಿಯಾನ್ ಇರಾನ್ ಮೊಜ್ತಬ ಮೊಹಮ್ಮದ್ಶಫಿ ಗೊಲೀಜ್ ವಿರುದ್ಧ 10-0ಯಲ್ಲಿ ಸೋಲು ಕಾಣುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.
ಒಟ್ಟಾರೆ ಟೂರ್ನಿಯಲ್ಲಿ 17 ಪದಕ ಭಾರತಕ್ಕೆ ದಕ್ಕಿದ್ದು, ಇದರಲ್ಲಿ 5 ಚಿನ್ನ, 5 ಬೆಳ್ಳಿ, 7 ಕಂಚು ಸೇರಿವೆ.