ಹ್ಯಾಂಗ್ಝೌ (ಚೀನಾ): ಪ್ಯಾರಾ ಏಷ್ಯನ್ ಗೇಮ್ಸ್ನಲ್ಲಿ ಮೂರನೇ ದಿನವೂ ಭಾರತ ಭರ್ಜರಿ ಪದಕದ ಬೇಟೆ ಮಾಡಿತು. ಬುಧವಾರ ಅಥ್ಲೀಟ್ಗಳು 6 ಚಿನ್ನ, 8 ಬೆಳ್ಳಿ, 16 ಕಂಚಿನಿಂದ ಒಟ್ಟಾರೆ 30 ಪದಕ ಗೆದ್ದಿದ್ದಾರೆ. ಮೂರನೇ ದಿನದ ಮುಕ್ತಾಯಕ್ಕೆ ಭಾರತ 64 (15 ಚಿನ್ನ, 20 ಬೆಳ್ಳಿ, 29 ಕಂಚು) ಪದಕಗಳನ್ನು ಜಯಿಸಿದೆ.
ಪ್ಯಾರಾ ಏಷ್ಯನ್ ಗೇಮ್ಸ್, 3ನೇ ದಿನ: 30 ಪದಕ ಬೇಟೆಯಾಡಿದ ಭಾರತೀಯ ಅಥ್ಲೀಟ್ಗಳು
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ 4ನೇ ಪ್ಯಾರಾ ಏಷ್ಯನ್ ಗೇಮ್ಸ್‌ನ 3ನೇ ದಿನ ಭಾರತ 30 ಪದಕಗಳನ್ನು ಬಾಚಿಕೊಂಡಿದೆ.
Etv Bharat
By PTI
Published : Oct 25, 2023, 10:45 PM IST
ಪದಕ ಪಟ್ಟಿಯಲ್ಲಿ ಭಾರತ 6ನೇ ಸ್ಥಾನ ಅಲಂಕರಿಸಿದೆ. ಚೀನಾ (300), ಇರಾನ್ (73), ಜಪಾನ್ (69), ಥಾಯ್ಲೆಂಡ್ (63) ಮತ್ತು ಉಜ್ಬೇಕಿಸ್ತಾನ್ (55) ಮೇಲಿನ ಐದು ಸ್ಥಾನಗಳಲ್ಲಿವೆ.
- 25 ವರ್ಷ ವಯಸ್ಸಿನ ಸುಮಿತ್ ಆಂಟಿಲ್ ಅವರ ಹಿಂದಿನ ವಿಶ್ವದಾಖಲೆ 70.83 ಮೀ ಮೀರಿಸಿ ಜಾವೆಲಿನ್ ಎಸೆದು ದಾಖಲೆ ಮಾಡಿದ್ದಾರೆ. ಸುಮಿತ್ ಆಂಟಿಲ್ ಎಫ್ 64 ಸ್ಪರ್ಧೆಯಲ್ಲಿ 73.29 ಮೀಟರ್ ದೂರ ಎಸೆದು ದಾಖಲೆ ನಿರ್ಮಿಸಿದ್ದಾರೆ. ಇದೇ ಸ್ಪರ್ಧೆಯಲ್ಲಿ ಪುಷ್ಪೇಂದ್ರ ಸಿಂಗ್ 62.06 ಮೀಟರ್ ಎಸೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
- ಅಂಕುರ್ ಧಾಮಾ ಏಷ್ಯನ್ ಪ್ಯಾರಾ ಗೇಮ್ಸ್‌ನ ಒಂದೇ ಆವೃತ್ತಿಯಲ್ಲಿ ಎರಡು ಚಿನ್ನದ ಪದಕಗಳನ್ನು ಗೆದ್ದ ಮೊದಲ ಭಾರತೀಯ ಎಂಬ ಇತಿಹಾಸ ನಿರ್ಮಿಸಿದರು. ಪುರುಷರ ಟಿ 11 1500ಮೀ ಓಟವನ್ನು 4:27.70 ಸಮಯದಿಂದ ಗುರಿ ತುಲುಪಿ ಅಗ್ರಸ್ಥಾನ ಪಡೆದು, ಚಿನ್ನ ಗೆದ್ದರು. ಹಿಂದಿನ ದಿನ ಟಿ 11 5000 ಮೀ ಓಟದಲ್ಲಿ ಚಿನ್ನಕ್ಕೆ ಮುತ್ತಿಕ್ಕಿದ್ದರು.
- ಪುರುಷರ ಎಫ್ 46 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಭಾರತ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ. ಸುಂದರ್ ಸಿಂಗ್ ಗುರ್ಜರ್ ಅವರು ತಮ್ಮ ಹಳೆಯ 67.79 ಮೀ. ದಾಖಲೆ ಮುರಿದು, 68.60 ಮೀಟರ್ ದೂರ ಎಸೆದು ಚಿನ್ನ ಗೆದ್ದರೆ, ರಿಂಕು ಮತ್ತು ಅಜೀತ್ ಸಿಂಗ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.
- ಮಹಿಳೆಯರ ಟಿ11 1500 ಮೀ ಸ್ಪರ್ಧೆಯಲ್ಲಿ ಭಾರತವು ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದುಕೊಂಡಿತು. ರಕ್ಷಿತಾ ರಾಜು ಮತ್ತು ಕಿಲ್ಲಾಕ ಲಲಿತಾ ಮೊದಲ ಎರಡು ಸ್ಥಾನಗಳನ್ನು ಪಡೆದರು.
- ಪುರುಷರ ಎಫ್37/38 ಜಾವೆಲಿನ್ ಥ್ರೋ ಮತ್ತು ಮಹಿಳೆಯರ ಟಿ47 ಲಾಂಗ್ ಜಂಪ್ ಸ್ಪರ್ಧೆಗಳಲ್ಲಿ ಹ್ಯಾನಿ ಮತ್ತು ನಿಮಿಷಾ ಸುರೇಶ್ ಚಕ್ಕುಂಗಲ್ಪರಂಬಿಲ್ ಚಿನ್ನದ ಪದಕ ಗೆದ್ದರು.
- ಭಾರತವು ಮಹಿಳೆಯರ ಎಫ್54/55 ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಮತ್ತು ಪುರುಷರ ಟಿ35 200 ಮೀ ಮತ್ತು ಟಿ37 200ಮೀ ನಲ್ಲಿ ಕಂಚಿನ ಪದಕ ಪಡೆದುಕೊಂಡಿತು.
-
ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಭಾವಿನಾ ಪಟೇಲ್ ಮಹಿಳೆಯರ ಸಿಂಗಲ್ಸ್ ಕ್ಲಾಸ್ 4ರಲ್ಲಿ ಕಂಚು ಗೆದ್ದರು. ಸಂದೀಪ್ ಡಾಂಗಿ ಪುರುಷರ ಸಿಂಗಲ್ಸ್ ಕ್ಲಾಸ್ 1 ರಲ್ಲಿ ಕಂಚಿಗೆ ತೃಪ್ತಿಪಟ್ಟರು.
- ಪ್ಯಾರಾ ಆರ್ಚರಿಯಲ್ಲಿ ಭಾರತ ಎರಡು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡಿತು. ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಭಾರತ ಆರು ಕಂಚಿನ ಪದಕ ಗೆದ್ದರೆ, ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಝೈನಾಬ್ ಖಾತುನ್ ಮತ್ತು ರಾಜ್‌ಕುಮಾರಿ ಮಹಿಳೆಯರ 61 ಕೆಜಿ ವಿಭಾಗದಲ್ಲಿ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು.
ಇದನ್ನೂ ಓದಿ:ಪ್ಯಾರಾ ಏಷ್ಯನ್ ಗೇಮ್ಸ್, 2ನೇ ದಿನ: ಭಾರತಕ್ಕೆ 3 ಚಿನ್ನ, ಪದಕ ಪಟ್ಟಿಯಲ್ಲಿ 5ನೇ ಸ್ಥಾನ