ಹ್ಯಾಂಗ್‌ಝೌ (ಚೀನಾ):ಇಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಭಾರತ ಪದಕ ಗಳಿಕೆಯ ಓಟ ಮುಂದುವರಿಸಿದೆ. ಎರಡನೇ ದಿನವಾದ ಮಂಗಳವಾರ 17 ಪದಕಗಳನ್ನು ಗೆದ್ದುಕೊಂಡಿತು. 3 ಚಿನ್ನ, 6 ಬೆಳ್ಳಿ ಮತ್ತು 8 ಕಂಚಿನ ಪದಕ ಒಳಗೊಂಡಿದೆ. ಒಟ್ಟಾರೆ 34 ಪದಕಗಳನ್ನು ಜಯಿಸಿರುವ ಭಾರತ ಪದಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಚೀನಾ 165, ಇರಾನ್ 47, ಜಪಾನ್ 45 ಮತ್ತು ಉಜ್ಬೇಕಿಸ್ತಾನ್ 38 ಪದಕದಿಂದ ಕ್ರಮವಾದ ಸ್ಥಾನಗಳಲ್ಲಿವೆ.
ದೀಪ್ತಿ ಜೀವನ್‌ಜಿಗೆ ಚಿನ್ನ: ಮಹಿಳೆಯರ 400 ಮೀ-ಟಿ20 ನಲ್ಲಿ ದೀಪ್ತಿ ಜೀವನ್‌ಜಿ ಚಿನ್ನದ ಪದಕ ಗೆದ್ದು ಹೊಸ ಏಷ್ಯನ್ ಪ್ಯಾರಾ ದಾಖಲೆ ಮತ್ತು ಗೇಮ್ಸ್ ದಾಖಲೆ ನಿರ್ಮಿಸಿದರು. ದೀಪ್ತಿ 56.69 ಸೆಕೆಂಡ್‌ಗಳ ದಾಖಲೆ ಸಮಯದಿಂದ ಗುರಿ ತಲುಪಿದರು. ಇದು ಅವರ ವೈಯುಕ್ತಿಕ ಮತ್ತು ಗೇಮ್ಸ್ನ ಅತ್ಯುತ್ತಮ ಸಮಯವಾಗಿದೆ. ಪುರುಷರ 400ಮೀ. ಟಿ 64 ಫೈನಲ್‌ನಲ್ಲಿ ಅಜಯ್ ಕುಮಾರ್ (54.85) ತಮ್ಮ ವೈಯಕ್ತಿಕ ಅತ್ಯುತ್ತಮ ಸಮಯ ದಾಖಲಿಸಿ ಬೆಳ್ಳಿ ಪದಕ ಪಡೆದರು.
ಪದಕ ಗೆದ್ದ ಸ್ಪರ್ಧೆಗಳು:
- ಮಾಕನಹಳ್ಳಿ ಶಂಕರಪ್ಪ ಶರತ್ ಪುರುಷರ 5000 ಮೀ. ಟಿ 13 ಸ್ಪರ್ಧೆಯಲ್ಲಿ 20:18.90 ಸಮಯದಿಂದ ಗುರಿ ತಲುಪಿ ಚಿನ್ನದ ಪದಕ ಗೆದ್ದರು.
- ತಟ್ಟೆ ಎಸೆತದಲ್ಲಿ ಭಾರತೀಯ ಕ್ರೀಡಾಪಟುಗಳು ಕ್ಲೀನ್ ಸ್ವೀಪ್ ಸಾಧನೆ ಮಾಡಿದರು. ಪುರುಷರ ಡಿಸ್ಕಸ್ ಥ್ರೋ ಎಫ್ 54/55/56 ಈವೆಂಟ್‌ನಲ್ಲಿ 1014 ಅಂಕದಿಂದ ನೀರಜ್ ಯಾದವ್ ಚಿನ್ನಕ್ಕೆ ಮುತ್ತಿಕ್ಕಿದರೆ, ಯೋಗೇಶ್ ಕಥುನಿಯಾ 946 ರಿಂದ ಬೆಳ್ಳಿ ಗೆದ್ದರು. ಮುತ್ತುರಾಜು ಕಂಚಿಗೆ ತೃಪ್ತಿ ಪಡಬೇಕಾಯಿತು.
- ಪ್ಯಾರಾ ಪವರ್‌ಲಿಫ್ಟಿಂಗ್ ಪುರುಷರ 65 ಕೆಜಿ ತೂಕ ವಿಭಾಗದಲ್ಲಿ ಅಶೋಕ್ ಕಂಚಿನ ಪದಕ ಗೆದ್ದುಕೊಂಡರು.
- ಪುರುಷರ 1500ಮೀ ಟಿ46 ಫೈನಲ್‌ನಲ್ಲಿ ಭಾರತದ ಇಬ್ಬರು ಅಥ್ಲೀಟ್ಗಳು ಪದಕ ಗೆದ್ದಿದ್ದಾರೆ. ಅಥ್ಲೀಟ್ ಪರ್ಮೋದ್ 4:09.25 ಸಮಯದೊಂದಿಗೆ ಬೆಳ್ಳಿ ಗೆದ್ದರೆ, ರಾಕೇಶ್ ಭೈರಾ 4:11: 09 ರ ಸಮಯದಿಂದ ಕಂಚಿನ ಪದಕ ಗೆದ್ದಿದ್ದಾರೆ.
- ಪ್ಯಾರಾ ಶೂಟಿಂಗ್ನಲ್ಲಿ ರುಬಿನಾ ಫ್ರಾನ್ಸಿಸ್ ಮಹಿಳೆಯರ 10ಮೀ ಏರ್ ಪಿಸ್ತೂಲ್ ಎಸ್ಎಚ್1 ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದರು.
- ರವಿ ರೊಂಗಾಲಿ ಅವರು 9.92 ಮೀಟರ್‌ಗಳ ಅತ್ಯುತ್ತಮ ಎಸೆತದೊಂದಿಗೆ ಪುರುಷರ ಶಾಟ್‌ಪುಟ್ ಎಫ್40 ಈವೆಂಟ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ.
- ಪುರುಷರ 10ಮೀ ಏರ್ ಪಿಸ್ತೂಲ್ ಎಸ್ಎಚ್1 ಸ್ಪರ್ಧೆಯಲ್ಲಿ ಭಾರತ ಎರಡು ಪದಕಗಳನ್ನು ಗೆದ್ದಿದೆ. ರುದ್ರಾಂಶ್ ಖಂಡೇಲ್ವಾಲ್ ಬೆಳ್ಳಿ ಮತ್ತು ಮನೀಶ್ ನರ್ವಾಲ್ ಕಂಚಿನ ಪದಕ ಜಯಿಸಿದ್ದಾರೆ.
ಇದನ್ನೂ ಓದಿ:ಡಿಕಾಟ್, ಕ್ಲಾಸೆನ್ ಅಬ್ಬರಕ್ಕೆ ಮಣಿದ ಬಾಂಗ್ಲಾ; ಮಹಮದುಲ್ಲಾ ಏಕಾಂಗಿ ಹೋರಾಟ ವ್ಯರ್ಥ; ಪಾಯಿಂಟ್ ಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿದ ದ.ಆಫ್ರಿಕಾ