ಹ್ಯಾಂಗ್‌ಝೌ (ಚೀನಾ):ಇಲ್ಲಿ ಸೋಮವಾರದಿಂದ ಆರಂಭವಾದ 4ನೇ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಅಥ್ಲೀಟ್ಗಳು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮೊದಲನೇ ದಿನವೇ ಆಟಗಾರರು ಪದಕ ಬೇಟೆ ಆರಂಭಿಸಿದ್ದಾರೆ.
ಪ್ರಾಚಿ ಯಾದವ್ ಅವರು ಮಹಿಳೆಯರ ಕ್ಯಾನೋಯಿಂಗ್ ವಿಎಲ್ 2 ವಿಭಾಗದ ಫೈನಲ್‌ನಲ್ಲಿ ಬೆಳ್ಳಿ ಗೆದ್ದರು. ಈ ಮೂಲಕ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಖಾತೆ ತೆರೆದರು.
ಅಂಕುರ್ ಧಾಮಾಗೆ ಚಿನ್ನ:ಪುರುಷರ 5,000 ಮೀ ಟಿ11 ಫೈನಲ್‌ನಲ್ಲಿ ಅಂಕುರ್ ಧಾಮಾ ಚಿನ್ನ ಜಯಿಸಿದರು.
ಹೈ-ಜಂಪ್ನಲ್ಲಿ ಪ್ರವೀಣ್‌ಗೆ ಚಿನ್ನ, ಉನ್ನಿಗೆ ಕಂಚು:ಪುರುಷರ ಹೈಜಂಪ್ ಟಿ64 ಫೈನಲ್‌ನಲ್ಲಿ ಪ್ರವೀಣ್ ಕುಮಾರ್ ಮತ್ತು ಉನ್ನಿ ರೇಣು ಉತ್ತಮ ಪ್ರದರ್ಶನ ನೀಡಿ ಭಾರತಕ್ಕೆ ಎರಡು ಪದಕ ತಂದುಕೊಟ್ಟರು. 2.02 ಮೀ. ಜಿಗಿದ ಪ್ರವೀಣ್ ಕುಮಾರ್ ಚಿನ್ನ ಗೆದ್ದರೆ, ಉಜ್ಬೇಕಿಸ್ತಾನ್‌ನ ತೆಮುರ್ಬೆಕ್ ಗಿಯಾಜೊವ್ (2.00 ಮೀ) ಬೆಳ್ಳಿ ಹಾಗೂ ಭಾರತದ ಇನ್ನೋರ್ವ ಅಥ್ಲಿಟ್ ಉನ್ನಿ ರೆಣು 1.95 ಮೀ ನಿಂದ ಕಂಚಿಗೆ ತೃಪ್ತಿಪಟ್ಟರು.
ನಿಶಾದ್ ಕುಮಾರ್ಗೆ ದಾಖಲೆಯ ಚಿನ್ನ: ಪುರುಷರ ಹೈ ಜಂಪ್ ಟಿ47 ವಿಭಾಗದಲ್ಲಿ ಭಾರತದ ನಿಶಾದ್ ಕುಮಾರ್ ಏಷ್ಯನ್ ಗೇಮ್ಸ್ ದಾಖಲೆ ಎತ್ತರಕ್ಕೆ ಜಿಗಿದು ಚಿನ್ನ ಸಂಪಾದಿಸಿರು. ನಿಶಾದ್ 2.02 ಮೀ ಎತ್ತರಕ್ಕೆ ಜಿಗಿದು ದಾಖಲೆ ನಿರ್ಮಿಸಿದರು.
ಗುಂಡು ಎಸೆತದಲ್ಲಿ ಕಂಚು: ಪುರುಷರ ಶಾಟ್ ಪುಟ್-ಎಫ್-11 ಫೈನಲ್‌ನಲ್ಲಿ ಮೋನು ಘಂಗಾಸ್ ಕಂಚಿನ ಪದಕ ಪಡೆದರು. ಮೋನು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 12.33 ಮೀ. ದೂರ ಎಸೆದು ವರ್ಷದ ಅತ್ಯುತ್ತಮ ಎಸೆತ ದಾಖಲಿಸಿದರು.
ಕ್ಲಬ್ ಥ್ರೋನಲ್ಲಿ 3 ಪದಕ: ಪುರುಷರ ಕ್ಲಬ್ ಥ್ರೋ-ಎಫ್ 51 ಫೈನಲ್‌ನಲ್ಲಿ ಪ್ರಣವ್ ಸೂರ್ಮಾ ಹಿಂದಿನ ದಾಖಲೆ ಮುರಿದು ಚಿನ್ನದ ಪದಕ ಗೆದ್ದರು. ತನ್ನ ಎರಡನೇ ಪ್ರಯತ್ನದಲ್ಲಿ 30.01 ಮೀ.ನೊಂದಿಗೆ ದಾಖಲೆ ನಿರ್ಮಿಸಿದರು. ಧರಂಬೀರ್ 28.76 ಮೀಟರ್‌ಗಳ ಪ್ರಯತ್ನದೊಂದಿಗೆ ಎರಡನೇ ಸ್ಥಾನ ಪಡೆದೆ, ಅಮಿತ್ ಕುಮಾರ್ 26.93 ಮೀ ದೂರ ಎಸೆದು ಕಂಚಿನ ಪದಕಕ್ಕೆ ತೃಪ್ತಿಪಟ್ಟರು.
ಪುರುಷರ ಹೈ ಜಂಪ್ ಚಿನ್ನ, ಬೆಳ್ಳಿ: ಪುರುಷರ ಹೈ ಜಂಪ್-ಟಿ63 ಸ್ಪರ್ಧೆಯಲ್ಲಿ ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಶೈಲೇಶ್ ಕುಮಾರ್ ಮತ್ತು ಮರಿಯಪ್ಪನ್ ತಂಗವೇಲು ಗಳಿಸಿದರು. ಶೈಲೇಶ್ 1.82 ಮೀ ಎತ್ತರ ಮುಟ್ಟಿ ಚಿನ್ನ ಗೆದ್ದರೆ ಮರಿಯಪ್ಪನ್ (1.80 ಮೀ) ಅವರನ್ನು 0.2 ಮೀ ಕಡಿಮೆ ಎತ್ತರ ಹಾರಿ ಬೆಳ್ಳಿ ಗೆದ್ದರು.
ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಈವರೆಗೆ ಒಟ್ಟು 17 ಪದಕ ಗೆದ್ದಿದ್ದು, ಅದರಲ್ಲಿ 6 ಚಿನ್ನ, 6 ಬೆಳ್ಳಿ, 5 ಕಂಚು ಒಳಗೊಂಡಿದೆ.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಬಾಬರ್, ಶಫೀಕ್ ಅರ್ಧಶತಕ: ಅಫ್ಘಾನಿಸ್ತಾನಕ್ಕೆ 283 ರನ್ ಗುರಿ ನೀಡಿದ ಪಾಕಿಸ್ತಾನ