ಕೊರಿಯಾ : ನಿನ್ನೆಯಿಂದ ಕೊರಿಯಾ ಗಣರಾಜ್ಯದ ಬುಸಾನ್‌ನಲ್ಲಿ ಏಷ್ಯನ್ ಕಬಡ್ಡಿ ಚಾಂಪಿಯನ್‌ಶಿಪ್ 2023 ಆರಂಭವಾಗಿದ್ದು, ಭಾರತದ ಪುರುಷರ ಕಬಡ್ಡಿ ತಂಡ ಮೂರನೇ ಗೆಲುವು ದಾಖಲಿಸಿತು. ಇಂದು ಜಪಾನ್ ವಿರುದ್ಧದ ಪಂದ್ಯದಲ್ಲಿ 62-17 ರಿಂದ ಗೆದ್ದು, ಹ್ಯಾಟ್ರಿಕ್ ವಿಜಯ ಸಾಧನೆ ಮಾಡಿದೆ.
ಭಾರತ ಮತ್ತು ಜಪಾನ್ ಎರಡೂ ತಂಡಗಳು ತಲಾ ಎರಡು ಗೆಲುವಿನೊಂದಿಗೆ ಅಖಾಡಕ್ಕಿಳಿದಿದ್ದವು. ಮಂಗಳವಾರ ಕೊರಿಯಾ ವಿರುದ್ಧ ಚೊಚ್ಚಲ ಪಂದ್ಯವನ್ನಾಡಿದ ಅಸ್ಲಂ ಇನಾಮದಾರ್ 10 ಅಂಕ ಪಡೆದಿದ್ದರು. ಇಂದು ಜಪಾನ್ ವಿರುದ್ಧವೂ ದಶ ಅಂಕಗಳನ್ನು ಪಡೆದು, ಪಂದ್ಯಾವಳಿಯ ಎರಡನೇ ಸೂಪರ್ 10 ಪಡೆದರು. ಪರ್ವೇಶ್ ಭೈನ್‌ವಾಲ್ ಭಾರತದ ರಕ್ಷಣೆಯ ಜವಾಬ್ದಾರಿಯನ್ನು ಮುನ್ನಡೆಸಿದರು. ಇದರಿಂದ ಭಾರತ ಎರಡು ಗೆಲುವು ಕಂಡಿದ್ದ ಜಪಾನ್ ಅನ್ನು ಸುಲಭವಾಗಿ ಮಣಿಸಿತು.
ಮಂಗಳವಾರ ಜಪಾನ್ ಹಾಂಗ್‌ಕಾಂಗ್ ವಿರುದ್ಧ 85-11 ಅಂತರದಲ್ಲಿ ಮತ್ತು ಇಂದು ಕೊರಿಯಾ ವಿರುದ್ಧ 45-18 ಅಂತರದಲ್ಲಿ ಗೆಲುವು ಸಾಧಿಸಿತ್ತು. ಆದರೆ ಮೂರನೇ ಪಂದ್ಯದಲ್ಲಿ ಎದುರಾಳಿಯಾಗಿ ಸಿಕ್ಕ ಭರತದ ಮುಂದೆ ಜಪಾನಿಯರ ಆಟ ನಡೆಯಲಿಲ್ಲ.
ಭಾರತವು ಜಪಾನ್ ತಂಡವನ್ನು ಪಂದ್ಯದಲ್ಲಿ ಆರು ಬಾರಿ ಆಲೌಟ್ ಮಾಡಿತು. ಹಾಲಿ ಚಾಂಪಿಯನ್ ಭಾರತ ನಾಲ್ಕನೇ ನಿಮಿಷದಲ್ಲಿ ತಮ್ಮ ಮೊದಲ ಆಲೌಟ್ ಗಳಿಸಿದರು. ಎಂಟನೇ ನಿಮಿಷದಲ್ಲಿ ಜಪಾನ್ ತಮ್ಮ ಖಾತೆಯ ಅಂಕವನ್ನು ತೆರೆಯುವಷ್ಟರಲ್ಲಿ ಭಾರತ 18-0 ಮುನ್ನಡೆ ಸಾಧಿಸಿತ್ತು. ಮೊದಲಾರ್ಧವು ಭಾರತದ ಪರವಾಗಿ 32-6 ಅಂಕಗಳೊಂದಿಗೆ ಕೊನೆಗೊಂಡಿತು. ನಾಯಕ ಪವನ್ ಸೆಹ್ರಾವತ್ ಮೊದಲಾರ್ಧದಲ್ಲಿ ಆರು ಪಾಯಿಂಟ್‌ಗಳೊಂದಿಗೆ ಭಾರತದ ಅಗ್ರ ರೈಡರ್ ಆಗಿದ್ದರು.
ದ್ವಿತೀಯಾರ್ಧದಲ್ಲಿ ಜಪಾನ್ 11 ಅಂಕಗಳನ್ನು ಕಲೆಹಾಕಿತು. ಕೊನೆಯ ನಿಮಿಷದಲ್ಲಿ ಭಾರತ ಅಂಕವನ್ನು ಬಿಟ್ಟುಕೊಟ್ಟಂತೆ ಕಂಡಿತು. ಮೊದಲ ಭಾಗಕ್ಕೆ ಹೋಲಿಸಿದರೆ ದ್ವಿತೀಯಾರ್ಧದಲ್ಲಿ ಜಪಾನಿಯರು ಉತ್ತಮ ಕಮ್ಬ್ಯಾಕ್ ಮಾಡಿದರು. ಆದರೆ ಭಾರತ ಕಬಡ್ಡಿ ಪಂದ್ಯವನ್ನು 45 ಅಂಕಗಳ ಅಂತರದಿಂದ ಗೆದ್ದುಕೊಂಡಿತು.
ಇದಕ್ಕೂ ಮುನ್ನ ನಡೆದ ಪಂದ್ಯಾವಳಿಯಲ್ಲಿ ಭಾರತವು ಕೊರಿಯಾ ವಿರುದ್ಧ 76-13 ಅಂಕಗಳಿಂದ ಪ್ರಾಬಲ್ಯ ಸಾಧಿಸಿತು. ಮಂಗಳವಾರ ಚೈನೀಸ್ ತೈಪೆ ವಿರುದ್ಧ 53-19 ಅಂಕಗಳಿಂದ ಜಯಗಳಿಸಿತು. ಅಂಕಪಟ್ಟಿಯಲ್ಲಿ ದೊಡ್ಡ ಅಂತರದಲ್ಲಿ ಮೂರು ಪಂದ್ಯಗಳನ್ನು ಗೆದ್ದಿರುವ ಭಾರತ ಅಗ್ರಸ್ಥಾನದಲ್ಲಿದೆ. ಇರಾನ್ ಎರಡನೇ ಸ್ಥಾನದಲ್ಲಿದ್ದರೆ, ಜಪಾನ್ ಮೂರು, ಚೈನೀಸ್ ತೈಪೆ ನಾಲ್ಕನೇ ಸ್ಥಾನದಲ್ಲಿದಲ್ಲರೆ, ಕ್ರಮವಾಗಿ ಕೊರಿಯ ಮತ್ತು ಹಾಂಗ್‌ಕಾಂಗ್ ಐದು ಹಾಗೂ ಆರರಲ್ಲಿದೆ.
ಗುರುವಾರ ನಡೆಯಲಿರುವ ಬಹು ನಿರೀಕ್ಷಿತ ಪಂದ್ಯದಲ್ಲಿ ಭಾರತ ಕಬಡ್ಡಿ ತಂಡ ಇರಾನ್ ವಿರುದ್ಧ ಸೆಣಸಲಿದೆ. ಇರಾನ್ ಕೂಡ ಇದುವರೆಗೆ ಟೂರ್ನಿಯಲ್ಲಿ ಮೂರು ಗೆಲುವನ್ನು ಕಂಡಿದೆ. ಶುಕ್ರವಾರ ಭಾರತ ಹಾಂಗ್‌ಕಾಂಗ್ ವಿರುದ್ಧ ಆಡಲಿದ್ದು, ಅದೇ ದಿನ ಫೈನಲ್ ನಡೆಯಲಿರುವ ಕಾರಣ ಅಂಕಪಟ್ಟಿಯಲ್ಲಿ ಅಗ್ರ ಎರಡರಲ್ಲಿ ಇರುವವರ ನಡುವೆ ಫೈಟ್ ಏರ್ಪಡಲಿದೆ.
ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ, ಇರಾನ್, ಜಪಾನ್, ಕೊರಿಯಾ, ಚೈನೀಸ್ ತೈಪೆ ಮತ್ತು ಹಾಂಗ್ ಕಾಂಗ್ ಭಾಗವಹಿಸುತ್ತಿವೆ. ರೌಂಡ್ ರಾಬಿನ್ ಲೀಗ್ ನಂತರ ಅಗ್ರ ಎರಡು ತಂಡಗಳು ಶುಕ್ರವಾರ ಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ.
ಇದನ್ನೂ ಓದಿ:World Cup Qualifiers: ಏಕದಿನ ಕ್ರಿಕೆಟ್ ವಿಶ್ವಕಪ್ ಕ್ವಾಲಿಫೈಯರ್ಸ್- ನಾಳೆಯಿಂದ ಸೂಪರ್ ಸಿಕ್ಸ್ ಫೈಟ್; ವೆಸ್ಟ್ ಇಂಡೀಸ್ ಸ್ಥಾನ ಅನಿಶ್ಚಿತ!