ನವದೆಹಲಿ:ಎಫ್‌ಐಎಚ್ ಒಡಿಶಾ ಹಾಕಿ ಪುರುಷರ ವಿಶ್ವಕಪ್ 2023 ಭುವನೇಶ್ವರ್-ರೂರ್ಕೆಲಾದಲ್ಲಿ ಅದ್ಭುತವಾಗಿ ನಿರ್ವಹಿಸಿದ್ದಕ್ಕಾಗಿ ಹಾಕಿ ಇಂಡಿಯಾಕ್ಕೆ ಏಷ್ಯನ್ ಹಾಕಿ ಫೆಡರೇಶನ್ (ಎಎಚ್‌ಎಫ್) ಗುರುವಾರ ಅತ್ಯುತ್ತಮ ಸಂಘಟಕ ರಾಷ್ಟ್ರ ಪ್ರಶಸ್ತಿಯನ್ನು ನೀಡಿದೆ. ಕೊರಿಯಾದ ಮುಂಗ್ಯೊಂಗ್‌ನಲ್ಲಿ ನಡೆದ ಎಎಚ್‌ಎಫ್ ಸಭೆಯಲ್ಲಿ ಹಾಕಿ ಇಂಡಿಯಾ ಪ್ರಧಾನ ಕಾರ್ಯದರ್ಶಿ ಭೋಲಾ ನಾಥ್ ಸಿಂಗ್ ಅವರು ಪ್ರಶಸ್ತಿಯನ್ನು ಸ್ವೀಕರಿಸಿದರು.
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಹಾಕಿ ವಿಶ್ವಕಪ್ನಲ್ಲಿ ಪ್ರಪಂಚದಾದ್ಯಂತದ 16 ತಂಡಗಳು ಭಾಗವಹಿಸುತ್ತವೆ. ಈ ಬಾರಿ ಭುವನೇಶ್ವರ ಮತ್ತು ರೂರ್ಕೆಲಾದಲ್ಲಿ ಎರಡು ವಿಶ್ವ ದರ್ಜೆ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆದಿದ್ದವು. ಭುವನೇಶ್ವರದ ಕಳಿಂಗ ಹಾಕಿ ಸ್ಟೇಡಿಯಂ ಈ ಹಿಂದೆ ಎಫ್‌ಐಎಚ್ ಹಾಕಿ ಪುರುಷರ ವಿಶ್ವಕಪ್ 2018 ಅನ್ನು ಆಯೋಜಿಸಿದ್ದರೆ, ರೂರ್ಕೆಲಾದಲ್ಲಿ ಹೊಸದಾಗಿ ನಿರ್ಮಿಸಲಾದ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗಿತ್ತು. ಇದು ವಿಶ್ವದ ಅತಿದೊಡ್ಡ ಹಾಕಿ ಕ್ರೀಡಾಂಗಣವಾಗಿ ಭ್ರಾತೃತ್ವದ ಕಲ್ಪನೆಯನ್ನು ಮೂಡಿಸಿತ್ತು.
ಒಲಿಂಪಿಕ್ ಶೈಲಿಯ ಹಾಕಿ ಗ್ರಾಮದ ರೀತಿ ಬಿರ್ಸಾ ಮುಂಡಾ ಹಾಕಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಒಲಿಂಪಿಕ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್‌ನಂತಹ ಕ್ರೀಡಾಕೂಟಗಳ ಗೇಮ್ಸ್ ವಿಲೇಜ್‌ನಂತಹ ಅನುಭವವನ್ನು ನೀಡುತ್ತದೆ. ಇಲ್ಲಿ ಭಾಗವಹಿಸುವ ತಂಡಕ್ಕೆ ಅಗತ್ಯವಾದ ಎಲ್ಲಾ ಸೌಲಭ್ಯಗಳು ದೊರೆಯುವಂತೆ ನಿರ್ಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಲಾಗಿತ್ತು.
ಭಾರತದಲ್ಲಿ ಆಯೋಜನೆಗೊಂಡಿದ್ದ ಹಾಕಿ ವಿಶ್ವಕಪ್ಗೆ ಒಡಿಶಾ ಸರ್ಕಾರ ಉತ್ತಮ ಬೆಂಬಲ ನೀಡಿತ್ತು. ಅಭಿಮಾನಿಗಳನ್ನು ಕ್ರಿಡಾಂಗಣಕ್ಕೆ ಕರೆತರಲು ಬಸ್ ವ್ಯವಸ್ಥೆಯಿಂದ ಹಿಡಿದು ಎಲ್ಲವನ್ನೂ ನೋಡಿಕೊಂಡಿತ್ತು. ವಿಶ್ವಕಪ್ ಟ್ರೋಫಿಯನ್ನು ನಗರದಾದ್ಯಂತ ಮೆರವಣಿಗೆ ಮಾಡಲಾಗಿತ್ತು. ಉದ್ಘಾಟನಾ ಕಾರ್ಯಕ್ರಮಕ್ಕೆ ಬಾಲಿವುಡ್ ಸ್ಟಾರ್ ನಟರಾದ ರಣವೀರ್ ಸಿಂಗ್, ದಿಶಾ ಪಟಾನಿ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಕೆ-ಪಾಪ್ ಬ್ಯಾಂಡ್ನಿಂದ ಸಂಗೀತ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು.