ನವದೆಹಲಿ/ ಹ್ಯಾಂಗ್‌ಝೌ:ಚೀನಾದಲ್ಲಿನಡೆಯಲಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ತೆರಳಬೇಕಿದ್ದ ಭಾರತ ವೂಶೂ ತಂಡದಲ್ಲಿದ್ದ ಅರುಣಾಚಲ ಪ್ರದೇಶದ ಮೂವರು ಪಟುಗಳಿಗೆ ಪ್ರವೇಶ ನಿರಾಕರಿಸಲಾಗಿದೆ. ಈ ಸಂಬಂಧ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಮತ್ತು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (ಒಸಿಎ) ಸಂಘಟನಾ ಸಮಿತಿಯು ಚೀನಾ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಮತ್ತೊಂದೆಡೆ, ಪ್ರವೇಶ ನಿಷೇಧದ ಹಿನ್ನೆಲೆಯಲ್ಲಿ ಮಾಹಿತಿ ಮತ್ತು ಪ್ರಸಾರ ಮತ್ತು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಶುಕ್ರವಾರ ತಮ್ಮ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಭಾರತದ ಮೂವರು ಮಹಿಳಾ ವೂಶೂ ಆಟಗಾರ್ತಿಯರಾದ ನೈಮನ್ ವಾಂಗ್ಸು, ಒನಿಲು ಟೆಗಾ ಮತ್ತು ಮೆಪುಂಗ್ ಲಾಮ್ಗು ಬುಧವಾರ ರಾತ್ರಿ ದೆಹಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ಚೀನಾಕ್ಕೆ ತಂಡ ಜೊತೆ ಪ್ರಯಾಣಿಸಬೇಕಿತ್ತು. ಆದರೆ, ಇಂದಿನವರೆಗೂ ಅವರಿಗೆ ಚೀನಾ ತಲುಪಲಾಗಲಿಲ್ಲ. ಮೂವರ ಪ್ರವೇಶಕ್ಕೆ ಚೀನಾ ಅಧಿಕಾರಿಗಳು ನಿರಾಕರಿಸಿದ್ದಾರೆ.
ಈ ಮೂವರು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿ (ಎಚ್ಎಜಿಓಸಿ)ಯಿಂದ ಮಾನ್ಯತಾ ಪತ್ರ ಪಡೆದಿದ್ದರು. ಈ ಮಾನ್ಯತಾ ಪತ್ರವನ್ನು ಪ್ರವೇಶ ವೀಸಾ ಎಂದು ಪರಿಗಣಿಸಲಾಗುತ್ತದೆ. ಅಥ್ಲೀಟ್ಗಳು ತಮ್ಮ ಪ್ರಯಾಣ ದಾಖಲೆಯನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕಿದ್ದು, ಇದನ್ನು ಆಟಗಾರರು ಆಗಮಿಸುವ ವೇಳೆ ದೃಢೀಕರಿಸಲಾಗುತ್ತದೆ.
ಮೂರು ಆಟಗಾರರಲ್ಲಿ ಇಬ್ಬರು ಇ-ಮಾನ್ಯತೆ ಪಡೆದಿದ್ದಾರೆ. (ಇದು ಏಷ್ಯನ್ ಗೇಮ್ಸ್‌ಗೆ ವೀಸಾವಾಗಿಯೂ ಕಾರ್ಯನಿರ್ವಹಿಸುತ್ತದೆ) ಆದರೆ ಅದನ್ನು ಡೌನ್‌ಲೋಡ್ ಮಾಡಲು ಮತ್ತು ಮೌಲ್ಯೀಕರಿಸಲು ಸಾಧ್ಯವಾಗಲಿಲ್ಲ. ಅವರಿಗೆ ಮಾನ್ಯತೆ ನೀಡದಿದ್ದಲ್ಲಿ, ಅದು ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ನಿಯಮಗಳ ಮತ್ತು ಒಲಿಂಪಿಕ್ ಚಾರ್ಟರ್‌ನ ಉಲ್ಲಂಘನೆಯಾಗಿದೆ. ಏಷ್ಯನ್ ಗೇಮ್ಸ್‌ನ ಸಂಘಟನಾ ಸಮಿತಿಯ ಜೊತೆ ಚರ್ಚಿಸಲಾಗಿದೆ ಎಂದು ಹ್ಯಾಂಗ್‌ಝೌನಲ್ಲಿರುವ ಭಾರತೀಯ ಅಧಿಕಾರಿ ಭೂಪಿಂದರ್ ಸಿಂಗ್ ಬಜ್ವಾ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ ಮತ್ತು ಸಂಘಟನಾ ಸಮಿತಿಯ ಪದಾಧಿಕಾರಿಗಳು ಪ್ರವೇಶ ನಿರಾಕರಣೆಯ ಬಗ್ಗೆ ಅವರು ಪ್ರಶ್ನಿಸಿದ್ದಾರೆ. ಈ ವೇಳೆ ಚೀನಾ ಅಧಿಕಾರಿಗಳು ಪ್ರತಿಕ್ರಿಯಿಸಿ, ಈ ವಿಷಯವನ್ನು ಗುರುವಾರ ರಾತ್ರಿ ನಮ್ಮ ಗಮನಕ್ಕೆ ತರಲಾಯಿತು ಮತ್ತು ನಾವು ಇದನ್ನು ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್ ಸಂಘಟನಾ ಸಮಿತಿಯಲ್ಲಿ ಪ್ರಸ್ತಾಪಿಸಿದ್ದೇವೆ. ಚೀನಾ ಸರ್ಕಾರ ಅಡಿಯಲ್ಲಿ ಸಮಸ್ಯೆಯನ್ನು ಪರಿಹಾರಿಸಲಾಗುವುದು. ಆಟಗಾರರಿಗೆ ವೀಸಾವನ್ನು ನಿರಾಕರಿಸಲಾಗಿಲ್ಲ, ಅವರಿಗೆ ವಿಭಿನ್ನ ರೀತಿಯ ವೀಸಾವನ್ನು ನೀಡಲಾಯಿತು. ಅದನ್ನು ಅವರು ತೆಗೆದುಕೊಳ್ಳಲು ನಿರಾಕರಿಸಿದರು. ಇದರಿಂದಾಗಿ ಅವರು ಚೀನಾಕ್ಕೆ ಪ್ರವೇಶಕ್ಕೆ ಸಮಸ್ಯೆ ಆಗಿದೆ ಎಂದು ಹೇಳಿದ್ದಾರೆ.
ಭಾರತದಿಂದ ಖಂಡನೆ: ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಚೀನಾದ ಅಧಿಕಾರಿಗಳು ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಗೇಮ್ಸ್‌ಗೆ ಮಾನ್ಯತೆ ಮತ್ತು ಪ್ರವೇಶವನ್ನು ನಿರಾಕರಿಸುವ ಮೂಲಕ ಅರುಣಾಚಲ ಪ್ರದೇಶದ ಕೆಲವು ಭಾರತೀಯ ಕ್ರೀಡಾ ಪಟುಗಳ ವಿರುದ್ಧ ಉದ್ದೇಶಪೂರ್ವಕ ಮತ್ತು ಪೂರ್ವಭಾವಿ ರೀತಿಯಲ್ಲಿ ತಾರತಮ್ಯ ಮಾಡಿದ್ದಾರೆ ಎಂಬುವುದನ್ನು ಭಾರತ ಸರ್ಕಾರವು ಗಮನಿಸಿದೆ. ಅರುಣಾಚಲ ಪ್ರದೇಶದ ವಿಚಾರದಲ್ಲಿ ಕ್ರೀಡಾಪಟುಗಳ ನಿರಾಕರಣೆ ಮಾಡಲಾಗಿದೆ. ಅರುಣಾಚಲ ಪ್ರದೇಶದ ಯಾವಾಗಲೂ ಭಾರತದ ಅವಿಭಾಜ್ಯ ಎಂದು ತಿಳಿಸಿದ್ದಾರೆ.
ನಮ್ಮ ಕೆಲವು ಕ್ರೀಡಾ ಪಟುಗಳಿಗೆ ಚೀನಾ ಉದ್ದೇಶಪೂರ್ವಕವಾಗಿ ಮತ್ತು ಆಯ್ದ ಅಡ್ಡಿಪಡಿಸುವುದರ ವಿರುದ್ಧ ನವದೆಹಲಿ ಮತ್ತು ಬೀಜಿಂಗ್‌ನಲ್ಲಿ ಬಲವಾದ ಪ್ರತಿಭಟನೆಯನ್ನು ದಾಖಲಿಸಲಾಗಿದೆ. ಚೀನಾದ ಕ್ರಮವು ಏಷ್ಯನ್ ಗೇಮ್ಸ್‌ನ ಉತ್ಸಾಹ ಮತ್ತು ಅವರ ನಡವಳಿಕೆಯನ್ನು ನಿಯಂತ್ರಿಸುವ ನಿಯಮಗಳೆರಡನ್ನೂ ಉಲ್ಲಂಘಿಸುತ್ತದೆ. ಇದು ಸದಸ್ಯ ರಾಷ್ಟ್ರಗಳ ಸ್ಪರ್ಧಿಗಳ ವಿರುದ್ಧ ತಾರತಮ್ಯವಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಆಸ್ಟ್ರೇಲಿಯಾ ವಿರುದ್ಧ ಟಾಸ್ ಗೆದ್ದ ಭಾರತ ಬೌಲಿಂಗ್; ಅಯ್ಯರ್, ಸೂರ್ಯಗೆ ಪರೀಕ್ಷೆ