ಕರ್ನಾಟಕ

karnataka

ETV Bharat / sports

Asian Games: ಪ್ರಾಥಮಿಕ ಲೀಗ್​ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು.. ಟೇಬಲ್ ಟೆನ್ನಿಸ್​ನಲ್ಲಿ ಪ್ರಿ-ಕ್ವಾರ್ಟರ್​ಗೆ ಪ್ರವೇಶ - ಭಾರತೀಯ ಕ್ರೀಡಾ ಪ್ರಾಧಿಕಾರ

ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಪುರುಷರು ಮತ್ತು ಮಹಿಳೆಯರು ಪ್ರಾಥಮಿಕ ಲೀಗ್​ ಹಂತದಲ್ಲಿ ಸುಲಭ ಗೆಲುವು ದಾಖಲಿಸಿ ಪ್ರಿ-ಕ್ವಾರ್ಟರ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.

Asian Games
Asian Games

By ETV Bharat Karnataka Team

Published : Sep 23, 2023, 6:14 PM IST

ಹ್ಯಾಂಗ್‌ಝೌ (ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಟೇಬಲ್ ಟೆನ್ನಿಸ್ ಸ್ಪರ್ಧೆಗಳಲ್ಲಿ ಭಾರತದ ಪುರುಷ ಮತ್ತು ಮಹಿಳಾ ತಂಡಗಳು ತಮ್ಮ ಗುಂಪಿನಲ್ಲಿನ ಪ್ರಾಥಮಿಕ ಸುತ್ತಿನ ಪಂದ್ಯಗಳಲ್ಲಿ ಗೆಲುವಿನ ಓಟವನ್ನು ಅಜೇಯವಾಗಿ ಮುಂದುವರಿಸಿದ್ದು, ಸತತ ಗೆಲುವಿನಿಂದ ಪ್ರಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿವೆ. ಗೊಂಗ್ಶು ಕೆನಾಲ್ ಸ್ಪೋರ್ಟ್ಸ್ ಪಾರ್ಕ್ ಜಿಮ್ನಾಷಿಯಂನಲ್ಲಿ ಇಂದು (ಶನಿವಾರ) ನಡೆದ ಎಫ್ ಗುಂಪಿನ ಪ್ರಾಥಮಿಕ ಪಂದ್ಯದಲ್ಲಿ ಭಾರತದ ಪುರುಷರು ತಜಕಿಸ್ತಾನವನ್ನು 3-0 ಗೋಲುಗಳಿಂದ ಸೋಲಿಸಿದರೆ, ಮಹಿಳೆಯರು ನೆರೆಯ ನೇಪಾಳವನ್ನು 3-0 ಅಂತರದಿಂದ ಸೋಲಿಸಿದರು.

ಕಿರಿಯ ಆಟಗಾರರಿಗೆ ಅವಕಾಶ ನೀಡಿದರೂ, ಭಾರತೀಯರು ಎಲ್ಲಾ ಮೂರು ಪಂದ್ಯಗಳನ್ನು ನೇರ ಗೇಮ್‌ಗಳಲ್ಲಿ ಗೆದ್ದರು. ಮಾನವ್ ಠಕ್ಕರ್ 11-8, 11-5, 11-8 ರಿಂದ ಅಫ್ಜಲ್‌ಖೋನ್ ಮಹ್ಮುದೋವ್ ಅವರನ್ನು ಮಣಿಸಿದರೆ, ಮನುಷ್ ಶಾ 13-11, 11-7, 11-5 ರಿಂದ ಉಬೈದುಲ್ಲೊ ಸಿಜ್ಲ್ಟೋನೊವ್ ಅವರನ್ನು ಮಣಿಸಿದರು. ಮಾನವ್ ಠಕ್ಕರ್ ಸ್ವಲ್ಪ ಪ್ರಯಾಸದ ಗೆಲುವು ಪಡೆದರು ಆದರೆ, ಮನುಷ್ ಶಾ ಎದುರಾಳಿಗೆ ಹೆಚ್ಚು ಅವಕಾಶಗಳನ್ನು ಕೊಡದೇ ಗುರಿ ಮುಟ್ಟಿದರು.

ಹರ್ಮೀತ್ ದೇಸಾಯಿ 11-1, 11-3, 11-5 ಅಂತರದಿಂದ ಭಾರತಕ್ಕೆ ಜಯ ತಂದುಕೊಟ್ಟರು. ಟಾಪ್ ತಾರೆ ಮಣಿಕಾ ಬಾತ್ರಾ ವಿಶ್ರಾಂತಿ ಪಡೆದರೂ ಮಹಿಳಾ ತಂಡವೂ ಸುಲಭ ಜಯ ದಾಖಲಿಸಿತು. ದಿಯಾ ಚಿತಾಲೆ 11-1, 11-6, 11-8 ರಿಂದ ಸಿಕ್ಕ ಶ್ರೇಷ್ಠಾ ಅವರನ್ನು ಸೋಲಿಸಿದರೆ, ಅಹಿಕಾ ಮುಖರ್ಜಿ 11-3, 11-7, 11-2 ರಿಂದ ನಬಿತಾ ಶ್ರೇಷ್ಠಾ ಅವರನ್ನು ಮನಿಸಿದರು. ಮೂರನೇ ಪಂದ್ಯದಲ್ಲಿ ಸುತೀರ್ಥ ಮುಖರ್ಜಿ ಅವರು ಇವಾನಾ ಮಗರ್ ಥಾಪಾ ಅವರನ್ನು 11-1, 11-5, 11-2 ಸೆಟ್‌ಗಳಿಂದ ಸೋಲಿಸಿ ಭಾರತಕ್ಕೆ ಜಯ ತಂದುಕೊಟ್ಟರು.

ಭಾನುವಾರ ನಡೆಯಲಿರುವ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಭಾರತ ಪುರುಷರು ಕಝಾಕಿಸ್ತಾನ್ ವಿರುದ್ಧ ಆಡಲಿದ್ದು, ಭಾನುವಾರ ನಡೆಯಲಿರುವ ಮತ್ತೊಂದು ಸುತ್ತಿನ 16ರ ಪಂದ್ಯದಲ್ಲಿ ಮಹಿಳೆಯರು ಥಾಯ್ಲೆಂಡ್‌ನ್ನು ಎದುರಿಸಲಿದ್ದಾರೆ.

ಇಂದಿನಿಂದ ಮಿನಿ ಒಲಂಪಿಕ್ಸ್​ ಆರಂಭ: ಮಿನಿ ಒಲಂಪಿಕ್ಸ್​ ಎಂದೇ ಕರೆಸಿಜಕೊಳ್ಳುವ ಏಷ್ಯನ್​ ಗೇಮ್ಸ್​ ಅಥವಾ ಏಷ್ಯಾಡ್​ ಇಂದಿನಿಂದ ಆರಂಭವಾಗಿದೆ. ಭಾರತದಿಂದ 150ಕ್ಕೂ ಹೆಚ್ಚಿನ ಆಟಗಾರರು ಈ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದು, ಕಳೆದ ಬಾರಿಯಂತೆ ಹೆಚ್ಚಿನ ಪದಕಗಳ ನಿರೀಕ್ಷೆ ಅಥ್ಲೀಟ್​ಗಳ ಮೇಲಿದೆ.

ಅರುಣಾಚಲ ಪ್ರದೇಶದ ಮೂವರು ಮಹಿಳಾ ಆಟಗಾರ್ತಿ ಪ್ರವೇಶ ನಿರಾಕರಣೆ:ವೀಸಾ ಸಮಸ್ಯೆಯಿಂದಾಗಿಮೂವರು ವುಶು ಆಟಗಾರ್ತಿಯರಿಗೆ ಚೀನಾಕ್ಕೆ ತೆರಳುವಲ್ಲಿ ಸಮಸ್ಯೆ ಆಗಿದೆ. ಮೂವರು ಸದ್ಯ ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಆಶ್ರಯದಲ್ಲಿ ದೆಹಲಿಯಲ್ಲಿದ್ದಾರೆ. ಎಸ್‌ಎಐ ತನ್ನ ಎಕ್ಸ್​ ಆ್ಯಪ್​ ಖಾತೆಯಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರವು ಮೂವರು ಆಟಗಾರರಿಗೆ ಬೆಂಬಲವಾಗಿ ನಿಂತಿರುವುದಾಗಿ ಪೋಸ್ಟ್​ ಮಾಡಿಕೊಂಡಿದೆ.

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಚೀನಾದ ಈ ನಡೆಯನ್ನು ಖಂಡಿಸಿದ್ದಾರೆ. "ಹಂಗ್‌ಝೌನಲ್ಲಿ 19 ನೇ ಏಷ್ಯನ್ ಗೇಮ್ಸ್‌ನಲ್ಲಿ ಭಾಗವಹಿಸಲಿರುವ ಅರುಣಾಚಲ ಪ್ರದೇಶದ ನಮ್ಮ ವುಶು ಅಥ್ಲೀಟ್‌ಗಳಿಗೆ ವೀಸಾ ನಿರಾಕರಿಸಿದ ಚೀನಾದ ಈ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಇದು ಕ್ರೀಡಾ ಮನೋಭಾವವನ್ನು ಮತ್ತು ಏಷ್ಯನ್ ಗೇಮ್ಸ್‌ನ ನಡವಳಿಕೆಯ ನಿಯಮ ಉಲ್ಲಂಘಿಸಿದಂತೆ" ಎಂದಿದ್ದಾರೆ.

ಇದನ್ನೂ ಓದಿ:Varanasi cricket stadium: ಶಿವನ ಥೀಮ್​ ಆಧರಿಸಿ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ: ಪ್ರಧಾನಿ ಮೋದಿಯಿಂದ ಶಂಕುಸ್ಥಾಪನೆ

ABOUT THE AUTHOR

...view details