ಹ್ಯಾಂಗ್‌ಝೌ (ಚೀನಾ): ಮಿನಿ ಒಲಂಪಿಕ್ಸ್ ಎಂದೇ ಕರೆಸಿಕೊಳ್ಳುವ ಏಷ್ಯನ್ ಗೇಮ್ಸ್ ಇಂದು ಅದ್ಧೂರಿ ಆರಂಭವನ್ನು ಪಡೆಯಿತು. ಈ ವೇಳೆ ಅಥ್ಲೀಟ್ಗಳು ಸಾಂಪ್ರದಾಯಿಕ ಉಡುಗೆಯೊಂದಿಗೆ ದೇಶವನ್ನು ಪ್ರತಿನಿಧಿಸಿದ್ದಾರೆ. ಒಲಿಂಪಿಕ್ ಪದಕ ವಿಜೇತ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ಮತ್ತು ಪುರುಷರ ಹಾಕಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ದೇಶದ ಧ್ವಜಧಾರಿಗಳಾಗಿ ಮುನ್ನಡೆದರು.
ಏಷ್ಯನ್ ಗೇಮ್ಸ್ಗೆ ಈ ಬಾರಿ ಭಾರತದಿಂದ 625 ಕ್ರೀಡಾಪಟುಗಳು 260 ತರಬೇತುದಾರರು ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿದಂತೆ 921 ಸದಸ್ಯರು ಚೀನಾದ ಹ್ಯಾಂಗ್‌ಝೌಗೆ ತೆರಳಿದ್ದಾರೆ. ಇದರಲ್ಲಿ 200 ಮಂದಿ ಮಾತ್ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ನಾಳೆ (ಭಾನುವಾರ) ಅನೇಕ ಕ್ರೀಡಾಪಟುಗಳಿಗೆ ಸ್ಪರ್ಧೆಗಳು ಇರುವುದರಿಂದ ಭಾಗವಹಿಸಲಿಲ್ಲ.
ಮೋದಿಯಿಂದ ಶುಭಾಶಯ: ಏಷ್ಯನ್ ಗೇಮ್ಸ್ ಅಧಿಕೃತವಾಗಿ ಪ್ರಾರಂಭವಾದಾಗ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ತಂಡಕ್ಕೆ ಶುಭ ಹಾರೈಸಿದರು. ಪ್ರಧಾನಿ ಮೋದಿ ಅವರು ಎಕ್ಸ್ ಆ್ಯಪ್ನಲ್ಲಿ (ಹಿಂದಿನ ಟ್ವಿಟರ್) ಭಾರತೀಯ ಅಥ್ಲೀಟ್ಗಳಿಗೆ ಶುಭ ಹಾರೈಸಿದರು. "ಏಷ್ಯನ್ ಗೇಮ್ಸ್ ಪ್ರಾರಂಭವಾಗುತ್ತಿದ್ದಂತೆ, ನಾನು ಭಾರತೀಯ ತುಕಡಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ನಾವು ಏಷ್ಯನ್ ಗೇಮ್ಸ್‌ನಲ್ಲಿ ನಮ್ಮ ಅತಿದೊಡ್ಡ ತುಕಡಿಯನ್ನು ಕಳುಹಿಸುವುದರಿಂದ ಕ್ರೀಡೆಯ ಬಗ್ಗೆ ಭಾರತದ ಉತ್ಸಾಹ ಮತ್ತು ಬದ್ಧತೆ ಎದ್ದುಕಾಣುತ್ತಿದೆ. ನಮ್ಮ ಕ್ರೀಡಾಪಟುಗಳು ಉತ್ತಮವಾಗಿ ಆಡಲಿ"ಎಂದು ಪ್ರಧಾನಿ ಮೋದಿ ಬರೆದುಕೊಂಡಿದ್ದಾರೆ.
ಭಾರತ ಕಳೆದ ಬಾರಿಯ ಈವೆಂಟ್‌ನ ಅಂದರೆ 2018ರ ಆವೃತ್ತಿಯಲ್ಲಿ ಒಟ್ಟು 70 ಪದಕಗಳನ್ನು ಗಳಿಸಿತ್ತು. ಇದರಿಂದ ಏಷ್ಯನ್ ಗೇಮ್ಸ್‌ನಲ್ಲಿ ಹೊಸ ದಾಖಲೆಯನ್ನು ಮಾಡಿತ್ತು. ಹೀಗಾಗಿ ಈ ವರ್ಷ ಹೆಚ್ಚಿನ ಪದಕಗಳ ನಿರೀಕ್ಷೆ ಮಾಡಲಾಗುತ್ತಿದೆ. ಅಧಿಕೃತವಾಗಿ ಆಟಗಳು ಸೆಪ್ಟೆಂಬರ್ 23 ರಂದು ಅಂದರೆ ಇಂದಿನಿಂದ ಪ್ರಾರಂಭವಾಗಲಿದೆ. ಆದರೆ, ಕ್ರಿಕೆಟ್, ಫುಟ್‌ಬಾಲ್, ವಾಲಿಬಾಲ್ ಮತ್ತು ಬೀಚ್ ವಾಲಿಬಾಲ್‌ನಂತಹ ಕ್ರೀಡೆಗಳು ಸೆಪ್ಟೆಂಬರ್ 19 ರಂದು ಪ್ರಾರಂಭವಾಗಿವೆ.
ಭಾರತ ಮೊದಲ ಬಾರಿಗೆ ಏಷ್ಯನ್ ಗೇಮ್ಸ್ನ ಕ್ರಿಕೆಟ್ನಲ್ಲಿ ಭಾಗವಹಿಸುತ್ತಿದೆ. ಇದರಲ್ಲಿ ಭಾರತದ ವನಿತೆಯರ ತಂಡ ಈಗಾಗಲೇ ಸೆಮಿಫೈನಲ್ಸ್ ತಲುಪಿದ್ದು, ನಾಳೆ ಬಾಂಗ್ಲಾ ವಿರುದ್ಧ ಗೆದ್ದಲ್ಲಿ ನೇರ ಫೈನಲ್ ಪ್ರವೇಶ ಪಡೆಯಲಿದೆ. ವನಿತೆಯರ ಕ್ರಿಕೆಟ್ನ ಫೈನಲ್ ಪಂದ್ಯ ಸೆ.25 ರಂದು ನಡೆಯಲಿದೆ. ಪುರುಷರ ಕ್ರಿಕೆಟ್ ಪಂದ್ಯಗಳು ಅಕ್ಟೋಬರ್ನಿಂದ ಆರಂಭವಾಗಲಿವೆ. ಅ.7 ರಂದು ಪುರುಷರ ಕ್ರಿಕೆಟ್ನ ಫೈನಲ್ ನಡೆಯಲಿದೆ. ಭಾರತ ರುತುರಾಜ್ ಗಾಯಕ್ವಾಡ್ ನಾಯಕತ್ವದಲ್ಲಿ ಏಷ್ಯನ್ ಗೇಮ್ಸ್ ಆಡಲಿದೆ.
ಕ್ರಿಕೆಟ್ ಹೊರತಾಗಿ ಏಷ್ಯನ್ ಗೇಮ್ಸ್‌ನಲ್ಲಿ ಒಲಿಂಪಿಕ್ ಮತ್ತು ವಿಶ್ವ ಚಾಂಪಿಯನ್ ನೀರಜ್ ಚೋಪ್ರಾ, ಏಷ್ಯನ್ ಗೇಮ್ಸ್‌ನಲ್ಲಿ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು, ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಕುಸ್ತಿಪಟು ಬಜರಂಗ್ ಪುನಿಯಾ ಮತ್ತು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಮೇಲೆ ಹೆಚ್ಚಿನ ನಿರೀಕ್ಷೆಗಳನ್ನು ಇಡಲಾಗಿದೆ.
ಇದನ್ನೂ ಓದಿ:Asian Games: ಪ್ರಾಥಮಿಕ ಲೀಗ್ ಪಂದ್ಯದಲ್ಲಿ ಭಾರತಕ್ಕೆ ಸುಲಭ ಗೆಲುವು.. ಟೇಬಲ್ ಟೆನ್ನಿಸ್ನಲ್ಲಿ ಪ್ರಿ-ಕ್ವಾರ್ಟರ್ಗೆ ಪ್ರವೇಶ