ಚೆನ್ನೈ (ತಮಿಳುನಾಡು):ಇತ್ತೀಚಿಗೆ ಚೀನಾದಲ್ಲಿ ಮುಕ್ತಾಯವಾದ 19ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ಅಭೂತಪೂರ್ವ ಪ್ರದರ್ಶನ ನೀಡಿದೆ. ದೇಶದ ಕ್ರೀಡಾಪಟುಗಳು ಇದೇ ಮೊದಲ ಬಾರಿಗೆ 28 ಚಿನ್ನ, 38 ಬೆಳ್ಳಿ ಮತ್ತು 41 ಕಂಚು ಸೇರಿದಂತೆ ಒಟ್ಟು 107 ಪದಕಗಳನ್ನು ಗೆದ್ದು ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ. ದೇಶಕ್ಕಾಗಿ ಪದಕ ಗೆದ್ದ ಸಾಧಕರಲ್ಲಿ ತಮಿಳುನಾಡಿನ ಓಟಗಾರ್ತಿ ವಿದ್ಯಾ ರಾಮರಾಜ್ ಕೂಡ ಒಬ್ಬರು. ಎರಡು ಬೆಳ್ಳಿ ಹಾಗೂ ಒಂದು ಕಂಚು ಪದಕ ಸೇರಿ ಮೂರು ಪದಕಗಳಿಗೆ ಕೊರಳೊಡ್ಡಿರುವ ವಿದ್ಯಾ, 39 ವರ್ಷಗಳ ಹಿಂದಿನ ಪಿ.ಟಿ.ಉಷಾ ದಾಖಲೆಯನ್ನು ಸರಿಗಟ್ಟುವ ಮೂಲಕ ಮಿಂಚು ಹರಿಸಿದ್ದರು. ತಮ್ಮ ಅನುಭವಗಳನ್ನು ಅವರು 'ಈಟಿವಿ ಭಾರತ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಏಷ್ಯನ್ ಗೇಮ್ಸ್‌ನಲ್ಲಿ ವಿದ್ಯಾ ರಾಮರಾಜ್ ಹಾಗೂ ಅವರ ಸಹೋದರಿ ನಿತ್ಯಾ ರಾಮರಾಜ್ ಒಟ್ಟಿಗೆ ಪಾಲ್ಗೊಂಡಿದ್ದರು. ಈ ಮೂಲಕ ಕೂಟದಲ್ಲಿ ಭಾಗವಹಿಸಿದ ಮೊದಲ ಭಾರತೀಯ ಅವಳಿ ಸಹೋದರಿಯರು ಎಂಬ ಅಪರೂಪದ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ವಿದ್ಯಾ ಅವರಂತೆ ನಿತ್ಯಾ ಕೂಡ ಅಥ್ಲೆಟಿಕ್ಸ್‌ನಲ್ಲಿ ಮಿಂಚಿದ್ದಾರೆ. ಈ ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ನಿತ್ಯಾ ಪದಕ ವಂಚಿತರಾದರೂ ವಿದ್ಯಾ ಮೂರು ಪದಕಗಳಿಗೆ ಮುತ್ತಿಕ್ಕಿ ಸಂಭ್ರಮಿಸಿದ್ದಾರೆ. 400 ಮೀಟರ್ ಹರ್ಡಲ್ಸ್ ಓಟದಲ್ಲಿ ಕಂಚಿನ ಪದಕ, 4X400 ಮೀಟರ್ ಮಹಿಳೆಯರ ರಿಲೇಯಲ್ಲಿ ಬೆಳ್ಳಿ ಹಾಗೂ 4X400 ಮೀಟರ್ ಮಿಶ್ರ ರಿಲೇ ಓಟದಲ್ಲಿ ಬೆಳ್ಳಿ ಗೆದ್ದಿದ್ದಾರೆ. ವಿದ್ಯಾ ನೀಡಿದ ಪ್ರದರ್ಶನದಲ್ಲಿ ನಿತ್ಯಾ ಕೂಡ ಸಂತಸವನ್ನು ಸಮನಾಗಿ ಸ್ವೀಕರಿಸಿದ್ದಾರೆ. ಕೊಯಮತ್ತೂರು ಜಿಲ್ಲೆಯ ಮಧುಕರೈ ಪಕ್ಕದ ಮೀನಾಕ್ಷಿಪುರಂ ಗ್ರಾಮದ ನಿವಾಸಿಗಳಾದ ಇಬ್ಬರು ಆಟಗಾರ್ತಿಯರು ಕೂಡ 'ಈಟಿವಿ ಭಾರತ್'ನೊಂದಿಗೆ ಮಾತನಾಡಿದರು.
ಅಥ್ಲೆಟಿಕ್ಸ್ ವಿಭಾಗದಲ್ಲಿ ವಿದ್ಯಾ ರಾಮರಾಜ್ 1984ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 400 ಮೀಟರ್ ಹರ್ಡಲ್ಸ್‌ನಲ್ಲಿ 55.68 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟುವ ಮೂಲಕ 39 ವರ್ಷಗಳ ಹಿಂದೆ ಪಿ.ಟಿ.ಉಷಾರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ್ದಾರೆ. ಈ ಮೂಲಕ 3ನೇ ಸ್ಥಾನ ಪಡೆದು ಕಂಚು ಗೆದ್ದಿದ್ದಾರೆ. ಇದರೊಂದಿಗೆ ಇಡೀ ಅಥ್ಲೆಟಿಕ್ಸ್ ಜಗತ್ತೇ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಇದೇ 400 ಮೀಟರ್ ಹರ್ಡಲ್ಸ್ ಸ್ಪರ್ಧೆಯಲ್ಲಿ ನಿತ್ಯಾ ರಾಮರಾಜ್ 4ನೇ ಸ್ಥಾನ ಪಡೆದು ಪದಕ ವಂಚಿತರಾಗಿದ್ದಾರೆ.