ಕರ್ನಾಟಕ

karnataka

ETV Bharat / sports

ಏಷ್ಯನ್ ಗೇಮ್ಸ್, ಮಹಿಳೆಯರ ಹಾಕಿ: 13-0 ಗೋಲುಗಳಿಂದ ಸಿಂಗಾಪುರ ಮಣಿಸಿದ ಭಾರತ! - ಏಷ್ಯನ್ ಗೇಮ್ಸ್

ಏಷ್ಯನ್​ ಗೇಮ್ಸ್​ ಮಹಿಳಾ ಹಾಕಿಯ ಮೊದಲ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು​ ದಾಖಲಿಸುವ ಮೂಲಕ ಸಂಗೀತಾ ಕುಮಾರಿ ಸ್ಟಾರ್​ ಆಟಗಾರ್ತಿಯಾಗಿ ಹೊರಹೊಮ್ಮಿದರು.

Asian Games: Indian women's hockey team won against Singapore in opening match
ಏಷ್ಯನ್ ಗೇಮ್ಸ್: ಓಪನಿಂಗ್​ನಲ್ಲೇ ಸಿಂಗಾಪುರ ವಿರುದ್ಧ ಅದ್ಭುತ ಗೆಲುವು ಸಾಧಿಸಿದ ಭಾರತದ ಮಹಿಳಾ ಹಾಕಿ ತಂಡ

By ETV Bharat Karnataka Team

Published : Sep 27, 2023, 2:06 PM IST

ಹ್ಯಾಂಗ್​ಜೌ (ಚೀನಾ): ಭಾರತದ ಮಹಿಳಾ ಹಾಕಿ ತಂಡವು ಇಂದು ಸಿಂಗಾಪುರ ವಿರುದ್ಧದ ನಡೆದ ಆರಂಭಿಕ ಪಂದ್ಯದಲ್ಲೇ ಬೃಹತ್‌ ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಮೂಲಕ ಹ್ಯಾಂಗ್​ಜೌನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ನಲ್ಲಿ ಅದ್ಭುತ ಅಭಿಯಾನ ಆರಂಭಿಸಿದೆ. ಪಂದ್ಯ ಎಲ್ಲಾ ನಾಲ್ಕು ಕ್ವಾರ್ಟರ್​ಗಳ ಕೊನೆಯಲ್ಲಿ ಸಿಂಗಾಪುರ ವಿರುದ್ಧ ಗೋಲ್​ಗಳ ಮಳೆ ಸುರಿಸಿದ ಭಾರತ 13-0 ಅಂತರದಲ್ಲಿ ಜಯ ಸಾಧಿಸಿತು.

ಉತ್ತಮ ಕೌಶಲ್ಯ ಹಾಗೂ ಚುರುಕಿನ ಕಾಲ್ಚಳಕದಿಂದ ಗೋಲ್​ ಹೊಡೆಯುವ ಮೂಲಕ ಪಂದ್ಯದ ಆರಂಭದಿಂದಲೂ ಭಾರತದ ಆಟಗಾರ್ತಿಯರು ಅತ್ಯುತ್ತಮ ಪ್ರದರ್ಶನ ತೋರಿದರು. ಸಂಗೀತಾ ಕುಮಾರಿ ಹ್ಯಾಟ್ರಿಕ್​ ಗೋಲು ದಾಖಲಿಸಿದರು.

ಆಟದ ಆರಂಭದಿಂದಲೇ ಪಾರಮ್ಯ ಮೆರೆದ ಭಾರತೀಯರು 6ನೇ ನಿಮಿಷಕ್ಕೆ ಗೋಲ್​ ಖಾತೆ ತೆರೆದರು. ಉದಿತಾ ಅವರು ಚೆಂಡನ್ನು ಗೋಲ್‌ಪೋಸ್ಟ್‌ ಸೇರಿಸುವಲ್ಲಿ ಯಶಸ್ವಿಯಾದರು. 8ನೇ ನಿಮಿಷಕ್ಕೆ ಸುಶೀಲಾ ಚಾನು ಎರಡನೇ ಗೋಲ್​ ಗಳಿಸುವ ಮೂಲಕ ಆಟ ಮುಂದುವರಿಸಿದರು. ಮತ್ತೆ ಮೂರು ನಿಮಿಷಕ್ಕೆ ದೀಪಿಕಾ ಮತ್ತೊಂದು ಗೋಲ್​ ಸಾಧಿಸುವ ಮೂಲಕ ತಂಡ 3-0ರ ಮುನ್ನಡೆ ಪಡೆಯಿತು. ಮೊದಲ ಕ್ವಾರ್ಟರ್​ ಅಂತ್ಯದ ವೇಳೆ ನವನೀತ್​ ಕೌರ್​2 ಗೋಲ್​ ಗಳಿಸಿದ್ದು, ಭಾರತದ ಸ್ಕೋರ್​ಲೈನ್​ 5-0 ತಲುಪಿತ್ತು. ಈ ಮೂಲಕ ಅದ್ಭುತ ಆಟ ಪ್ರಾರಂಭಿಸಿದ ಭಾರತ, ಆಟ ಮುಂದುವರಿದಂತೆ ಗೋಲ್​ಗಳ ಅಂತರವನ್ನು ಹೆಚ್ಚಿಸುತ್ತಲೇ ಸಾಗಿತು.

ಎರಡನೇ ಕ್ವಾರ್ಟರ್​ನಲ್ಲಿ ಆಟಗಾರ್ತಿ ದೀಪ್​ ಗ್ರೇಸ್​ ಎಕ್ಕಾ ಅವರು ಪೆನಾಲ್ಟಿ ಕಾರ್ನರ್​ ಅನ್ನು ಗೋಲ್​ ಆಗಿ ಪರಿವರ್ತಿಸಿದರೆ, ನೇಹಾ ಹಾಗೂ ಸಂಗೀತಾ ಕುಮಾರಿ ಕೂಡ ಮುನ್ನಡೆ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸಂಗೀತಾ ಕುಮಾರಿ ಎರಡು ಗೋಲ್​ಗಳನ್ನು ಗಳಿಸಿದರೆ, ವಂದನಾ ಕಟಾರಿಯಾ ಹಾಗೂ ಮೋನಿಕಾ ಕೂಡ ತಲಾ ಒಂದೊಂದು ಗೋಲ್​ ಗಳಿಸಿದರು. ಪಂದ್ಯ ಅಂತ್ಯದ ವೇಳೆ ಭಾರತದ ಖಾತೆಯಲ್ಲಿ 13 ಗೋಲ್​ಗಳು ಸೇರ್ಪಡೆಗೊಂಡು ಸಿಂಗಾಪುರದ ತಂಡ ಹೀನಾಯವಾಗಿ ಸೋಲು ಕಂಡಿತು.

ಸಿಂಗಾಪುರದ ವಿರುದ್ಧ ಅಮೋಘ ಗೆಲುವು ಸಾಧಿಸಿದ ನಂತರ ಭಾರತದ ತಂಡ ಗ್ರೂಪ್​ ಫಿಕ್ಸ್ಚರ್​ನಲ್ಲಿ ಅಗ್ರಸ್ಥಾನಕ್ಕೆ ಬಂದಿದ್ದು, ಮುಂದಿನ ಮಂದ್ಯದಲ್ಲಿ ಮಲೇಷ್ಯಾವನ್ನು ಎದುರಿಸಲಿದೆ. ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿಫೈನಲ್​ ಪ್ರವೇಶಿಸಲಿದ್ದು, ಭಾರತದ ಸುಲಭವಾಗಿ ಟೂರ್ನಿಯಲ್ಲಿ ಮುನ್ನಡೆ ಸಾಧಿಸುವ ಗುರಿ ಹೊಂದಿದೆ.

ಇದನ್ನೂ ಓದಿ :ಏಷ್ಯನ್ ಗೇಮ್ಸ್: 50 ಮೀಟರ್ ರೈಫಲ್​ನಲ್ಲಿ ಸಿಫ್ಟ್ ಕೌರ್ ಸಮ್ರಾಗೆ ವಿಶ್ವದಾಖಲೆಯ ಚಿನ್ನ; ಆಶಿ ಚೌಕ್ಸೆಗೆ ಕಂಚು

ABOUT THE AUTHOR

...view details