ಹ್ಯಾಂಗ್‌ಝೌ:ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮತ್ತೊಂದು ದಾಖಲೆ ಬರೆದಿದೆ. ಏಷ್ಯಾಡ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ಯಾಡ್ಮಿಂಟನ್ನಲ್ಲಿ ಚಿನ್ನದ ಪದಕ ಪಡೆದಿದೆ. ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ಫೈನಲ್‌ನಲ್ಲಿ 'ಸಾಚಿ' ಖ್ಯಾತಿಯ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಕೊರಿಯಾದ ಚೊಯ್ ಸೊಲ್ಗ್ಯೂ ಮತ್ತು ಕಿಮ್ ವೊನ್ಹೊ ಜೋಡಿಯನ್ನು ಸೋಲಿಸಿ, ಬಂಗಾರದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಭಾರತ ಏಷ್ಯಾಡ್ನಲ್ಲಿ 101 ನೇ ಪದಕವನ್ನು ತನ್ನದಾಗಿಸಿಕೊಂಡಿತು.
ಈ ಪದಕದೊಂದಿಗೆ ಭಾರತ ಬ್ಯಾಡ್ಮಿಂಟನ್ನಲ್ಲಿ ಮೂರನೇ ಪದಕ ಗೆದ್ದಿತು. ಪುರುಷರ ಸಿಂಗಲ್ಸ್ನಲ್ಲಿ ಹೆಚ್ಎಸ್ ಪ್ರಣೋಯ್ ಕಂಚು ಗೆದ್ದರೆ, ಪುರುಷರ ಡಬಲ್ಸ್‌ನಲ್ಲಿ ಸಾಚಿ ಜೋಡಿ ಚಿನ್ನ ಮತ್ತು ಪುರುಷರ ಇನ್ನೊಂದು ತಂಡ ಬೆಳ್ಳಿ ಪದಕ ಪಡೆಯಿತು.
ಪಂದ್ಯ ಹೀಗಿತ್ತು:ಸವಾಲಿನಿಂದ ಕೂಡಿದ್ದ ಡಬಲ್ಸ್ನ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿಯು, ದಕ್ಷಿಣ ಕೊರಿಯಾದ ಚೊಯ್ ಸೊಲ್ಗ್ಯೂ ಮತ್ತು ಕಿಮ್ ವೊನ್ಹೊ ಜೋಡಿಯನ್ನು 57 ನಿಮಿಷಗಳಲ್ಲಿ 21-18, 21-16 ನೇರ ಸೆಟ್ಗಳಿಂದ ಸೋಲಿಸಿ ತಮ್ಮ ಅಮೋಘ ಪ್ರದರ್ಶನವನ್ನು ಮುಂದುವರಿಸಿತು. ಮೊದಲ ಸೆಟ್‌ನಲ್ಲಿ ದಕ್ಷಿಣ ಕೊರಿಯಾ ಜೋಡಿ 18-15ರಲ್ಲಿ ಮುನ್ನಡೆ ಸಾಧಿಸಿತ್ತು. ಭಾರತದ ಸ್ಟಾರ್ ಜೋಡಿ ಮರು ಹೋರಾಟ ನಡೆಸಿ, ಆರು ಅಂಕಗಳನ್ನು ಸತತವಾಗಿ ಖಾತೆಗೆ ಸೇರಿಸಿಕೊಳ್ಳುವ ಮೂಲಕ 21-18 ರಿಂದ ಮೊದಲ ಸೆಟ್ ಅನ್ನು ಗೆದ್ದಿತು.