ಹ್ಯಾಂಗ್‌ಝೌ (ಚೀನಾ): ಏಷ್ಯಾನ್ ಗೇಮ್ಸ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಯನ್ನು ಮಣಿಸುವ ಮೂಲಕ ಭಾರತ ಸ್ಕ್ವಾಷ್ ಗೇಮ್‌ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. ಇಂದು (ಶನಿವಾರ) ನಡೆದ ಫೈನಲ್ ಪಂದ್ಯದಲ್ಲಿ ಮಹೇಶ್ ಮಂಗಾಂವ್ಕರ್, ಸೌರವ್ ಘೋಸಾಲ್ ಮತ್ತು ಅಭಯ್ ಸಿಂಗ್ ದಿಟ್ಟ ಪ್ರದರ್ಶನ ತೋರಿದ್ದು, ತೀವ್ರ ಪೈಪೋಟಿಯ ನಡುವೆ ಪಾಕಿಸ್ತಾನವನ್ನು 2-1 ರಿಂದ ಸೋಲಿಸಿ ಬಂಗಾರದ ಪದಕಕ್ಕೆ ಮುತ್ತಿಕ್ಕಿದ್ದಾರೆ.
ಏಷ್ಯಾಡ್ನ ಏಳನೇ ದಿನವಾದ ಇಂದು ಭಾರತಕ್ಕೆ ಒಲಿದ ಎರಡನೇ ಚಿನ್ನದ ಪದಕ ಇದಾಗಿದೆ. ಟೆನಿಸ್ನ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ರುತುಜಾ ಭೋಸಲೆ, ರೋಹನ್ ಬೋಪಣ್ಣ ಜೋಡಿಗೆ ಚಿನ್ನವನ್ನು ಗೆದ್ದಿದ್ದರು. ಈಗ ಪರುಷರ ಸ್ಕ್ವಾಷ್ನಲ್ಲಿ ಭಾರತಕ್ಕೆ ಚಿನ್ನ ಪ್ರಾಪ್ತಿ ಆಗುವ ಮೂಲಕ 10 ಬಂಗಾರದ ಪದಕಗಳು ಗೆದ್ದಂತಾಗಿದೆ. ಪ್ರಸ್ತುತ ಭಾರತ ಎಂಟು ವಿಭಾಗದಲ್ಲಿ ಪದಕಗಳನ್ನು ಬಾಚಿಕೊಂಡಿದ್ದು, 10 ಚಿನ್ನ, 13 ಬೆಳ್ಳಿ ಮತ್ತು 13 ಕಂಚು ಸೇರಿ ಒಟ್ಟು 36 ಪದಕ ತನ್ನದಾಗಿಸಿಕೊಂಡಿದೆ. ಪದಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ.
ಸ್ಕ್ವಾಷ್ನಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಪಂದ್ಯದ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಇಕ್ಬಾಲ್ ಅವರು ಮಹೇಶ್ ಮಂಗಾಂವ್ಕರ್ ವಿರುದ್ಧ 5-1 ಮುನ್ನಡೆ ಸಾಧಿಸುವ ಮೂಲಕ ಆಟಕ್ಕೆ ಬಿರುಸಿನ ಆರಂಭ ನೀಡಿದರು. ಮಂಗಾಂವ್ಕರ್ ಇಕ್ಬಾಲ್ ವಿರುದ್ಧ 8-11, 11-3, 11-2 ನೇರ ಗೇಮ್‌ಗಳಲ್ಲಿ ಸೋತರು. ಎರಡನೇ ಪಂದ್ಯದಲ್ಲಿ ಅನುಭವಿ ಆಟಗಾರ ಸೌರವ್ ಘೋಸಲ್ ಅವರು ಮುಹಮ್ಮದ್ ಅಸಿಮ್ ಖಾನ್ ವಿರುದ್ಧ 11-5, 11-1, 11-3 ರಲ್ಲಿ ಜಯಗಳಿಸುವ ಮೂಲಕ ಟೈ ಸಾಧಿಸಿದರು.
ಪಾಕಿಸ್ತಾನದ ನೂರ್ ಜಮಾನ್ ವಿರುದ್ಧದ ನಿರ್ಣಾಯಕ ಪಂದ್ಯದ ಆರಂಭದಲ್ಲಿ ಅಭಯ್ ಸಿಂಗ್ 4 ಅಂಕಗಳ ಮುನ್ನಡೆ ಸಾಧಿಸಿದರು. ಪಂದ್ಯದ ನಾಲ್ಕನೇ ಗೇಮ್‌ನಲ್ಲಿ ಜಮಾನ್ ಕೆಲ ತಪ್ಪುಗಳನ್ನು ಮಾಡಿದ್ದು, ಅಭಯ್ ಇದನ್ನೇ ಅಂಕವಾಗಿ ಪರಿವರ್ತಿಸಿದರು. ಇದರಿಂದ ಅಂತಿಮ ಸುತ್ತಿನಲ್ಲಿ ಭಾರತ ಮೇಲುಗೈ ಸಾಧಿಸಿದ್ದು, ಪ್ರಶಸ್ತಿಯನ್ನು ಗೆದ್ದುಕೊಂಡಿತು.