ಹ್ಯಾಂಗ್‌ಝೌ:ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಬೇಟೆ ಮುಂದುವರಿದಿದೆ. ಪುರುಷರ ಕಬಡ್ಡಿಯಲ್ಲಿ ಭಾರತ ತಂಡ ಇರಾನ್ ವಿರುದ್ಧ ತೀವ್ರ ಹೋರಾಟ ನಡೆಸಿ ಚಿನ್ನದ ಪದಕ ಗೆದ್ದುಕೊಂಡಿದೆ. ಇತ್ತ ಮಹಿಳೆಯರ ಹಾಕಿ ಪಂದ್ಯದಲ್ಲಿ ಜಪಾನ್ ತಂಡವನ್ನು ಸೋಲಿಸಿ ಕಂಚಿಗೆ ಕೊರಳೊಡ್ಡಿದೆ.
ಕಬಡ್ಡಿಯ ಪವರ್‌ಹೌಸ್‌ಗಳಾದ ಭಾರತ ಮತ್ತು ಇರಾನ್ ನಡುವಿನ ಪಂದ್ಯ ರೋಚಕವಾಗಿ ಕೂಡಿರಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಪಂದ್ಯದ ಕೊನೆಯಲ್ಲಿ ವಿವಾದಿತ ತೀರ್ಪುಗಳಿಂದ ನಾಟಕೀಯವಾಗಿ ಪಂದ್ಯ ಮುಕ್ತಾಯವಾಯಿತು.
ವಿವಾದವೇನು?:ಪಂದ್ಯ ಮುಗಿಯಲು ಒಂದು ನಿಮಿಷ ಬಾಕಿ ಇದ್ದಾಗ ಭಾರತಕ್ಕೆ ಅಂಪೈರ್ಗಳು ನೀಡಿದ 3 ಅಂಕಗಳು ಇರಾನ್ ತಂಡವನ್ನು ಕೆರಳಿಸಿತು. ತೀರ್ಪುಗಾರರ ನಿರ್ಧಾರವನ್ನು ಇರಾನ್ ಪ್ರತಿಭಟಿಸಿತು. ಭಾರತ ತಂಡದ ಪವನ್ ಸೆಹ್ರಾವತ್ ರೇಡ್ ವೇಳೆ ಗೊಂದಲ ಉಂಟಾಯಿತು. ಪವನ್ ಟಚ್ ಲೈನ್ ಮುಟ್ಟಿಲ್ಲ ಎಂದು ಇರಾನ್ ವಾದಿಸಿತು. ನಿಯಮಗಳ ಪ್ರಕಾರ, ಎರಡೂ ತಂಡಗಳಿಗೆ ಮೊದಲು ತಲಾ 1 ಅಂಕ ನೀಡಲಾಯಿತು.
ಆದರೆ, ಭಾರತ ಇದನ್ನು ಮರುಪ್ರಶ್ನಿಸಿತು. ಪವನ್ ಕೋರ್ಟ್ನಿಂದ ಹೊರಬೀಳುವ ಮುನ್ನ ಲೈನ್ ಮುಟ್ಟಿದ್ದಾರೆ ಎಂದು ವಾದಿಸಿ 4 ಅಂಕಕ್ಕೆ ಬೇಡಿಕೆ ಇಟ್ಟಿತು. ಇದು ಮತ್ತಷ್ಟು ಗೊಂದಲು ಉಂಟು ಮಾಡಿತು. ಅಂತಾರಾಷ್ಟ್ರೀಯ ಕಬಡ್ಡಿ ಫೆಡರೇಷನ್ ನಿಯಮ 21ರ ಪ್ರಕಾರ ಪವನ್ ದಾಳಿಗೆ ಭಾರತ 3 ಅಂಕಗಳನ್ನು ಪಡೆಯಿತು. ಇದನ್ನೂ ವಿರೋಧಿಸಿದ ಇರಾನ್ ಪ್ರೊ ಕಬಡ್ಡಿ ಲೀಗ್‌ನಲ್ಲಿ ಬಳಸಲಾದ ಹೊಸ ನಿಯಮದಂತೆ ಎರಡು ತಂಡಗಳಿಗೆ ತಲಾ ಒಂದು ಅಂಕ ನೀಡಬೇಕು ಎಂದು ವಾದಿಸಿತು.
ಕೊನೆಯಲ್ಲಿ ವಿಡಿಯೋ ಪರಿಶೀಲನೆಯ ನಂತರ ಭಾರತಕ್ಕೆ 3 ಅಂಕಗಳನ್ನು ನೀಡಲಾಯಿತು. ತೀವ್ರ ಗೊಂದಲದ ನಂತರ ಭಾರತ ಕೊನೆಯಲ್ಲಿ 33-29 ಅಂಕಗಳಲ್ಲಿ ಗೆಲುವು ಸಾಧಿಸಿತು.