ಹ್ಯಾಂಗ್‌ಝೌ(ಚೀನಾ):ಏಷ್ಯನ್ ಕ್ರೀಡಾಕೂಟದ ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಗಳಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. ನಾಲ್ಕು ದಶಕಗಳ ನಂತರ ಡ್ರೆಸ್ಸೆಜ್ ಪ್ರಿಕ್ಸ್ ಸೇಂಟ್ ಜಾರ್ಜಸ್‌ನಲ್ಲಿ ಸುದೀಪ್ತಿ ಹಜೇಲಾ, ದಿವ್ಯಕೃತಿ ಸಿಂಗ್, ಹೃದಯ್ ಛೇಡಾ ಮತ್ತು ಅನುಷ್ ಅಗರ್ವಾಲಾ ಅವರ ಕ್ವಾರ್ಟೆಟ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸುದೀಪ್ತಿ (ಚಿನ್ಸ್ಕಿ ), ದಿವ್ಯಾಕೃತಿ (ಅಡ್ರಿನಾಲಿನ್ ಫಿರ್ದೋಡ್), ಹೃದಯ್ (ಕೆಮ್‌ಎಕ್ಸ್‌ಪ್ರೊ ಎಮರಾಲ್ಡ್) ಮತ್ತು ಅನುಷ್ (ಇಟ್ರೊ) ಅವರು 209.206 ಅಂಕಗಳನ್ನು ಗಳಿಸಿ ಆತಿಥೇಯ ಚೀನಾವನ್ನು ಮಣಿಸಿದ್ದಾರೆ.
ಸುಮಾರು 10 ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಏಷ್ಯಾದಾದ್ಯಂತದ ಹಲವಾರು ಅಥ್ಲೀಟ್‌ಗಳು ಭಾಗವಹಿಸಿದ್ದಾರೆ. ಅಗರ್ವಾಲ್, ಛೇಡಾ, ದಿವ್ಯಕೃತಿ ಮತ್ತು ಹಜೇಲಾ ಅವರ ಭಾರತೀಯ ಕ್ವಾರ್ಟೆಟ್‌ಗಳು ಪ್ರಬಲ ಹೋರಾಟ ತೋರಿದರು. ಅನುಷ್ ಅಗರ್ವಾಲಾ ಮತ್ತು ಅವರ ಕುದುರೆ ಇಟ್ರೊದಲ್ಲಿ 71.088 ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದರೆ, ಹೃದಯ್ ಛೇಡಾ - ಎಮರಾಲ್ಡ್ನಲ್ಲಿ 69.941, ದಿವ್ಯಾಕೃತಿ ಸಿಂಗ್-ಅಡ್ರಿನಾಲಿನ್ ಫಿರ್ದೋಡ್ನಲ್ಲಿ 68.176 ಮತ್ತು ಸುದೀಪ್ತಿ ಹಜೇಲಾ- ಚಿನ್ಸ್ಕಿನಲ್ಲಿ 66.706 ಅಂಕ ಗಳಿಸಿದರು. ಆತಿಥೇಯ ರಾಷ್ಟ್ರ ಚೀನಾ 204.882 ಅಂಕಗಳನ್ನು ಗಳಿಸಿದರು. ಹಾಂಕಾಂಗ್ 204.852 ಅಂಕ ಪಡೆದುಕೊಂಡಿತು.