ಕರ್ನಾಟಕ

karnataka

ಬ್ಯಾಡ್ಮಿಂಟನ್‌: ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ-ಚಿರಾಗ್ ಶೆಟ್ಟಿ ಜೋಡಿಗೆ ವಿಶ್ವದ ನಂ1 ಪಟ್ಟ!

By ETV Bharat Karnataka Team

Published : Oct 10, 2023, 5:12 PM IST

ಚೀನಾದ ಹ್ಯಾಂಗ್​ಝೌ ನಡೆದ ಏಷ್ಯಾಡ್​ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಬ್ಯಾಡ್ಮಿಂಟನ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ ನಂ.1 ಪಟ್ಟ ಅಲಂಕರಿಸಿದ್ದಾರೆ.

Etv Bharat
Etv Bharat

ನವದೆಹಲಿ:19ನೇ ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ ಪುರುಷರ ಅಗ್ರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಬಿಡಬ್ಲ್ಯುಎಫ್ ವಿಶ್ವ ಶ್ರೇಯಾಂಕದಲ್ಲಿ ನಂ.1 ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಇದು ಈ ಜೋಡಿಯ ವೃತ್ತಿಜೀವನದ ಅತ್ಯುತ್ತಮ ಶ್ರೇಯಾಂಕವಾಗಿದೆ. ಈ ಮೈಲಿಗಲ್ಲು ಸಾಧಿಸಿದ ಮೊದಲ ಭಾರತೀಯ ಜೋಡಿ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಭಾರತದ ಬ್ಯಾಡ್ಮಿಂಟನ್ ಅಸೋಸಿಯೇಷನ್ (BAI) ಮಂಗಳವಾರ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್‌ ಖಾತೆಯಲ್ಲಿ ಈ ಮಾಹಿತಿಯ ಪೋಸ್ಟ್ ಹಂಚಿಕೊಂಡಿದೆ. "ವಿಶ್ವದ ಅಗ್ರಸ್ಥಾನ! ಈ ಸಾಧನೆ ಮಾಡಿದ ಮೊದಲ ಭಾರತೀಯ ಜೋಡಿ" ಎಂದು ಕ್ಯಾಪ್ಶನ್​ ಬರೆಯಲಾಗಿದೆ.

'ಸತ್-ಚಿ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಜೋಡಿ 2023ರಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇತ್ತೀಚೆಗೆ ಮುಕ್ತಾಯವಾದ ಏಷ್ಯಾಡ್​ನಲ್ಲಿ ದಕ್ಷಿಣ ಕೊರಿಯಾದ ಚೋಯ್ ಸೋಲ್-ಗ್ಯು ಮತ್ತು ಕಿಮ್ ವಾನ್-ಹೋ ಅವರನ್ನು ಮಣಿಸಿ ಚಿನ್ನ ಗೆದ್ದು ದಾಖಲೆ ಮಾಡಿದರು. ಇದಲ್ಲದೇ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ 58 ವರ್ಷಗಳ ನಂತರ ಪದಕ ಗೆದ್ದ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸುದಿರ್ಮನ್ ಕಪ್, ಥಾಯ್ಲೆಂಡ್ ಓಪನ್ ಮತ್ತು ಸಿಂಗಾಪುರ್ ಓಪನ್‌ನಲ್ಲಿ ಆರಂಭಿಕ ಹಿನ್ನಡೆಗಳ ಹೊರತಾಗಿಯೂ, ಇಂಡೋನೇಷ್ಯಾ ಸೂಪರ್ 1000, ಕೊರಿಯಾ ಸೂಪರ್ 500 ಮತ್ತು ಸ್ವಿಸ್ ಓಪನ್ ಸೂಪರ್ 300ನಲ್ಲಿ ಪ್ರಶಸ್ತಿ ಬಾಚಿಕೊಂಡಿದ್ದಾರೆ.

ಸಾತ್ವಿಕ್​ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ 2022 ರಲ್ಲಿ ತಮ್ಮ ಯಶಸ್ವಿ ಪ್ರಯಾಣ ಪ್ರಾರಂಭಿಸಿದರು. ಇಂಡಿಯನ್ ಓಪನ್, ಫ್ರೆಂಚ್ ಓಪನ್, ಸ್ವಿಸ್ ಓಪನ್, ಇಂಡೋನೇಷ್ಯಾ ಓಪನ್ ಮತ್ತು ಕೊರಿಯಾ ಓಪನ್ ಸೇರಿದಂತೆ ಐದು ಬಿಡ್ಲ್ಯೂಎಫ್ ವಿಶ್ವ ಟೂರ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಇಂಡೋನೇಷ್ಯಾ ಓಪನ್‌ನಲ್ಲಿ ಸಾಧಿಸಿದ ವಿಜಯವು ಭಾರತಕ್ಕೆ ಐತಿಹಾಸಿಕ ಕ್ಷಣವಾಗಿತ್ತು. ಪುರುಷರ ಡಬಲ್ಸ್‌ನಲ್ಲಿ ದೇಶದ ಚೊಚ್ಚಲ ಬಿಡ್ಲ್ಯೂಎಫ್ ಸೂಪರ್ 1000 ವರ್ಲ್ಡ್ ಟೂರ್ ಪ್ರಶಸ್ತಿ ಪಡೆದುಕೊಂಡಿತು. ಅದೇ ಫಾರ್ಮ್​ನಲ್ಲಿ ಮಂದುವರೆದ ಜೋಡಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪುರುಷರ ಡಬಲ್ಸ್ ವಿಭಾಗದಲ್ಲಿ ಚಿನ್ನ ಸಾಧನೆ ತೋರಿದರು. ದುಬೈನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚು ಜಯಿಸಿದ್ದರು.

ಸಾತ್ವಿಕ್ ಮತ್ತು ಚಿರಾಗ್ ಈ ವರ್ಷ 18 ಪಂದ್ಯಾವಳಿಗಳಿಂದ 92,411 ಪಾಯಿಂಟ್‌ ಪಡೆದುಕೊಂಡಿದ್ದಾರೆ. ಎರಡನೇ ಸ್ಥಾನದಲ್ಲಿರುವ ಫಜರ್ ಅಲ್ಫಿಯಾನ್ ಮತ್ತು ಮೊಹಮ್ಮದ್ ರಿಯಾನ್ ಅರ್ಡಿಯಾಂಟೊಗಿಂತ 2,000 ಪಾಯಿಂಟ್‌ ಮುಂದಿದ್ದಾರೆ.

ಪುರುಷರ ಸಿಂಗಲ್ಸ್​ನಲ್ಲಿ ಎಚ್​.ಎಸ್.ಪ್ರಣಯ್​ 8ನೇ ಸ್ಥಾನದಲ್ಲಿದ್ದರೆ, ಲಕ್ಷ್ಯಸೇನ್​ 15 ಮತ್ತು ಕಿದಂಬಿ ಶ್ರೀಕಾಂತ್​ ​20ನೇ ಸ್ಥಾನದಲ್ಲಿದ್ದಾರೆ. ಮಹಿಳೆಯರ ಸಿಂಗಲ್ಸ್​ನಲ್ಲಿ ಪಿ.ವಿ.ಸಿಂಧು 13ನೇ ಶ್ರೇಯಾಂಕ ಹೊಂದಿದ್ದಾರೆ.

ಇದನ್ನೂ ಓದಿ:ICC Cricket World Cup 2023: ಕೆಎಲ್​ ರಾಹುಲ್​ಗೆ ಗಾಯವೇ ವರವಾಯ್ತೆ?.. ಕಮ್​ಬ್ಯಾಕ್​ ಬಳಿಕ ರೊಚ್ಚಿಗೇಳುತ್ತಿರುವ ಕನ್ನಡಿಗ​!

ABOUT THE AUTHOR

...view details