ಹ್ಯಾಂಗ್‌ಝೌ(ಚೀನಾ): ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಕುದುರೆ ಸವಾರಿ ವೈಯಕ್ತಿಕ ಸ್ಪರ್ಧೆಯಲ್ಲಿ ಅನುಷ್ ಅಗರ್‌ವಾಲಾ ಕಂಚಿನ ಪದಕ ಗೆದ್ದಿದ್ದಾರೆ. ಅಗರ್‌ವಾಲಾ 73.030 ಅಂಕಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನವನ್ನು ಪಡೆದರು. ಈ ಮೂಲಕ ಏಷ್ಯನ್ ಗೇಮ್ಸ್‌ನ ಎರಡನೇ ಪದಕಕ್ಕೆ ಅಗರ್‌ವಾಲಾ ಮುತ್ತಿಟ್ಟರು.
ಇದೇ ಸ್ಪರ್ಧೆಯಲ್ಲಿ ಮಲೇಷಿಯಾದ ಬಿನ್ ಮಹಮದ್ ಫಾತಿಲ್ ಮೊಹಮ್ಮದ್ ಕಬಿಲ್ ಅಂಬಾಕ್ ಅವರು 75.780 ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದು ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಮತ್ತೊಂದೆಡೆ ಹಾಂಕಾಂಗ್‌ನ ಜಾಕ್ವೆಲಿನ್ ವಿಂಗ್ ಯಿಂಗ್ ಸಿಯು 73.450 ಅಂಕ ಗಳಿಸುವ ಮೂಲಕ ಬೆಳ್ಳಿ ಪದಕ ಪಡೆದರು.
ಬುಧವಾರ ಅಗರ್‌ವಾಲಾ, ಹೃದಯ ವಿಪುಲ್ ಚೆಡ್ಡಾ, ದಿವ್ಯಾಕೃತಿ ಸಿಂಗ್ ಮತ್ತು ಸುದೀಪ್ತಿ ಹಜೆಲಾ ಅವರನ್ನು ಒಳಗೊಂಡ ತಂಡ ಕುದುರೆ ಸವಾರಿಯಲ್ಲಿ 41 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದು ಇತಿಹಾಸ ನಿರ್ಮಿಸಿತು. ಮತ್ತೊಂದಡೆ ಅರ್ಹತಾ ಪಂದ್ಯದ ಸುತ್ತಿನಲ್ಲಿ ಅಗ್ರಸ್ಥಾನ ಪಡೆದಿದ್ದ ಭಾರತದ ಆಟಗಾರ ಹೃದಯ ವಿಪುಲ್ ಚೆಡ್ಡಾ ಪದಕ ಸ್ಪರ್ಧೆಯಿಂದ ಹೊರಬಿದ್ದಿದ್ದರು.
41 ವರ್ಷದ ಬಳಿಕ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ ಭಾರತ :ಏಷ್ಯನ್ ಕ್ರೀಡಾಕೂಟದ ಈಕ್ವೆಸ್ಟ್ರಿಯನ್ (ಕುದುರೆ ಸವಾರಿ) ಸ್ಪರ್ಧೆಯಲ್ಲಿ ನಾಲ್ಕು ದಶಕಗಳ ನಂತರ ಭಾರತ ಇತಿಹಾಸ ನಿರ್ಮಿಸಿತ್ತು. ಡ್ರೆಸ್ಸೆಜ್ ಪ್ರಿಕ್ಸ್ ಸೇಂಟ್ ಜಾರ್ಜಸ್‌ನಲ್ಲಿ ಸುದೀಪ್ತಿ ಹಜೇಲಾ, ದಿವ್ಯಾಕೃತಿ ಸಿಂಗ್, ಹೃದಯ್ ಚೆಡ್ಡಾ ಮತ್ತು ಅನುಷ್ ಅಗರ್‌ವಾಲಾ ಅವರ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಸುದೀಪ್ತಿ (ಚಿನ್ಸ್ಕಿ ), ದಿವ್ಯಾಕೃತಿ (ಅಡ್ರಿನಾಲಿನ್ ಫಿರ್ದೋಡ್), ಹೃದಯ್ (ಕೆಮ್‌ಎಕ್ಸ್‌ಪ್ರೊ ಎಮರಾಲ್ಡ್) ಮತ್ತು ಅನುಷ್ (ಇಟ್ರೊ) ಅವರು 209.206 ಅಂಕಗಳನ್ನು ಗಳಿಸಿ ಚೀನಾವನ್ನು ಮಣಿಸಿದ್ದರು.
ಸುಮಾರು 10 ಗಂಟೆಗಳ ಕಾಲ ನಡೆದ ಸ್ಪರ್ಧೆಯಲ್ಲಿ ಏಷ್ಯಾದ ಹಲವು ಅಥ್ಲೀಟ್‌ಗಳು ಭಾಗವಹಿಸಿದ್ದರು. ಇವರನ್ನೆಲ್ಲ ಹಿಂದಿಕ್ಕಿ ಅಗರ್ವಾಲ್, ಚೆಡ್ಡಾ, ದಿವ್ಯಾಕೃತಿ ಮತ್ತು ಹಜೇಲಾ ಅವರ ತಂಡ ಚಿನ್ನದ ಪದಕ ಪಡೆಯಿತು. ಅನುಷ್ ಅಗರ್‌ವಾಲಾ ಮತ್ತು ಅವರ ಕುದುರೆ ಇಟ್ರೊದಲ್ಲಿ 71.088 ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದರೆ, ಹೃದಯ್ ಛೇಡಾ - ಎಮರಾಲ್ಡ್ನಲ್ಲಿ 69.941, ದಿವ್ಯಾಕೃತಿ ಸಿಂಗ್- ಅಡ್ರಿನಾಲಿನ್ ಫಿರ್ದೋಡ್ನಲ್ಲಿ 68.176 ಮತ್ತು ಸುದೀಪ್ತಿ ಹಜೇಲಾ- ಚಿನ್ಸ್ಕಿನಲ್ಲಿ 66.706 ಅಂಕ ಗಳಿಸಿದ್ದರು. ಅತಿಥೇಯ ರಾಷ್ಟ್ರ ಚೀನಾ 204.882 ಅಂಕಗಳಿಸಿದರೆ, ಹಾಂಕಾಂಗ್ 204.852 ಅಂಕ ಗಳಿಸಿತ್ತು.
ಇದನ್ನೂ ಓದಿ :Asian games: ಭಾರತಕ್ಕೆ ಮತ್ತೊಂದು ಪದಕ... ವುಶು ಫೈನಲ್‌ನಲ್ಲಿ ಬೆಳ್ಳಿ ಪದಕ ಗೆದ್ದ ರೋಶಿಬಿನಾ ದೇವಿ ನವೋರೆಮ್