ಕರ್ನಾಟಕ

karnataka

ETV Bharat / sports

3,000 ಮೀ ಸ್ಟೀಪಲ್‌ಚೇಸ್‌ನಲ್ಲಿ ಭಾರತಕ್ಕೆ ಬೆಳ್ಳಿ, ಕಂಚು; ಆರ್ಚರಿ, ಸ್ಕ್ವಾಷ್‌​ನಲ್ಲಿ ಕ್ವಾರ್ಟರ್​ ಫೈನಲ್​ಗೆ ಲಗ್ಗೆ - ETV Bharath Kannada news

ಏಷ್ಯನ್​ ಗೇಮ್ಸ್​ನಲ್ಲಿ ಭಾರತಕ್ಕೆ ಈವರೆಗೆ ಅಥ್ಲೆಟಿಕ್ಸ್ ವಿಭಾಗದಲ್ಲಿ 2 ಚಿನ್ನ, 6 ಬೆಳ್ಳಿ ಮತ್ತು 6 ಕಂಚು ಸೇರಿದಂತೆ 13 ಪದಕಗಳು ಬಂದಿವೆ. ಒಟ್ಟಾರೆ, 13 ಚಿನ್ನ, 22 ಬೆಳ್ಳಿ ಮತ್ತು 23 ಕಂಚು ಸೇರಿ 58 ಪದಕಗಳಿಂದ ನಾಲ್ಕನೇ ಸ್ಥಾನದಲ್ಲಿದೆ.

Parul Chaudhary,  Priti Lamba
Parul Chaudhary, Priti Lamba

By ETV Bharat Karnataka Team

Published : Oct 2, 2023, 6:16 PM IST

Updated : Oct 2, 2023, 9:36 PM IST

ಹ್ಯಾಂಗ್‌ಝೌ (ಚೀನಾ): ಶೂಟಿಂಗ್​ ವಿಭಾಗದ ನಂತರ ಭಾರತ ಅಥ್ಲೆಟಿಕ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದೆ. ಏಷ್ಯಾಡ್​ನ 9ನೇ ದಿನವಾದ ಇಂದು (ಸೋಮವಾರ) 3,000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ಬೆಳ್ಳಿ ಹಾಗು ಕಂಚಿನ ಪದಕ ಗೌರವ ಸಿಕ್ಕಿದೆ. ಪಾರುಲ್ ಚೌಧರಿ 9:27.63 ಸೆಕೆಂಡ್​ಗಳ ಸಮಯದಲ್ಲಿ ಗುರಿ ಮುಟ್ಟಿ ಎರಡನೇ ಸ್ಥಾನ ಪಡೆದರು. ಚೊಚ್ಚಲ ಏಷ್ಯನ್​ ಗೇಮ್ಸ್​ ಆಡುತ್ತಿರುವ ಪ್ರೀತಿ 9:43.32 ಸೆಕೆಂಡ್‌ನಿಂದ ಮೂರನೇ ಸ್ಥಾನ ಅಲಂಕರಿಸಿದರು. ಇದು ಅವರ ವೈಯಕ್ತಿಕ ಅತ್ಯುತ್ತಮ ಸಮಯವಾಗಿದೆ. ಹಾಲಿ ವಿಶ್ವ ಚಾಂಪಿಯನ್ ಬಹ್ರೇನ್‌ನ ವಿನ್‌ಫ್ರೆಡ್ ಯಾವಿ 9:18.28 ಸೆಕೆಂಡ್‌ ಸಮಯದಿಂದ ಚಿನ್ನಕ್ಕೆ ಕೊರಳೊಡ್ಡಿದರು.

ಆರ್ಚರಿ-ಪುರುಷರ ಜೋಡಿ ಕ್ವಾರ್ಟರ್​ ಫೈನಲ್​ಗೆ: ಪುರುಷರ ರಿಕರ್ವ್ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಭಾರತೀಯ ಆರ್ಚರ್​​​ ಅತಾನು ದಾಸ್ 7-1 ರಿಂದ ತಜಕಿಸ್ತಾನ್‌ನ ರಾಬರ್ಟ್ ನಾಮ್ ವಿರುದ್ಧ ಗೆದ್ದರು. 31 ವರ್ಷದ ಅತಾನು ದಾಸ್ ನಾಳೆ ಕ್ವಾರ್ಟರ್ ಫೈನಲ್‌ನಲ್ಲಿ ಚೀನಾದ ಕ್ವಿ ಕ್ಸಿಯಾಂಗ್‌ಶುವೋ ವಿರುದ್ಧ ಸೆಣಸಲಿದ್ದಾರೆ. ಧೀರಜ್ ಬೊಮ್ಮದೇವರ ಕ್ವಾರ್ಟರ್ ಫೈನಲ್‌ನಲ್ಲಿ ಬಾಂಗ್ಲಾದೇಶದ ಮೊಹಮ್ಮದ್ ಹಕೀಮ್ ಅಹ್ಮದ್ ವಿರುದ್ಧ ಶೂಟ್-ಆಫ್ ಮೂಲಕ 6-5 ರಿಂದ ಗೆದ್ದಿದ್ದು, ನಾಳೆ ಇಲ್ಫತ್ ಅಬ್ದುಲ್ಲಿನ್ ಅವರನ್ನು ಬೊಮ್ಮದೇವರ ಎದುರಿಸಲಿದ್ದಾರೆ.

ಭಜನ್ ಕೌರ್ ಮತ್ತು ಅಂಕಿತಾ ಭಕತ್ ಅವರು ಮಹಿಳೆಯರ ರಿಕರ್ವ್ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಲು ವಿಫಲರಾದರು. ರಿಪಬ್ಲಿಕ್ ಆಫ್ ಕೊರಿಯಾದ ಸ್ಯಾನ್ ಆನ್ ವಿರುದ್ಧದ ಪ್ರೀ ಕ್ವಾರ್ಟರ್‌ಫೈನಲ್‌ನಲ್ಲಿ ಭಜನ್ ಕೌರ್ 7-3 ರಿಂದ ಸೋತರು. ಅಂಕಿತಾ ಭಕತ್ ಇಂಡೋನೇಷ್ಯಾದ ರೆಝಾ ಆಕ್ಟೇವಿಯಾ ವಿರುದ್ಧ 6-5 ರಿಂದ ಸೋಲನುಭವಿಸಿದರು.

ಸ್ಕ್ವಾಷ್​ ಸಿಂಗಲ್ಸ್​- ಕ್ವಾರ್ಟರ್​ ಫೈನಲ್ ಪ್ರವೇಶ​: ಕುವೈತ್‌ನ ಅಮ್ಮಾರ್ ಅಲ್ತಮಿಮಿ ವಿರುದ್ಧ 11-4, 11-4, 11-6ರ ಅಂತರದ ದಿಂದ 16ನೇ ಸುತ್ತಿನ ಪಂದ್ಯವನ್ನು ಭಾರತದ ಸೌರವ್ ಘೋಷಲ್ ಗೆದ್ದು, ಕ್ವಾರ್ಟರ್​ ಫೈನಲ್​ಗೆ ಪ್ರವೇಶಿಸಿದ್ದಾರೆ. ಪುರುಷರ ಗುಂಪು ಹಂತದ ಸ್ಕ್ವಾಷ್​​ ಗೇಮ್​ನಲ್ಲಿ ಭಾರತದ ತಂಡ ಚಿನ್ನದ ಪದಕ ಗೆದ್ದುಕೊಂಡಿತ್ತು. ಜಪಾನ್‌ನ ರ್ಯುನೊಸುಕೆ ತ್ಸುಕು ವಿರುದ್ಧ ನಾಳೆ ಸಂಜೆ 4:30ಕ್ಕೆ (ಭಾರತೀಯ ಕಾಲಮಾನ) ಸೌರವ್ ಘೋಷಲ್ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದಾರೆ.

ಪದಕ ವಂಚಿತರಾದ ಆಮ್ಲನ್: 100 ಮೀ ಮತ್ತು 200 ಮೀಟರ್ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಓಟಗಾರ ಅಮ್ಲಾನ್ ಬೊರ್ಗೊಹೈನ್ ಏಷ್ಯನ್​ ಗೇಮ್ಸ್​ನಲ್ಲಿ ಪದಕ ಸೋತರು. 200 ಮೀಟರ್​ ಓಟ 20.98 ಸೆಕೆಂಡ್‌ಗಳಲ್ಲಿ ಪೂರ್ಣಗೊಳಿಸದ ಅವರು ಫೈನಲ್‌ನಲ್ಲಿ ಆರನೇ ಸ್ಥಾನ ಪಡೆದರು. ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತ ಜಪಾನ್‌ನ ಕೋಕಿ ಉಯಾಮಾ 20.60 ಸೆಕೆಂಡ್​ನಿಂದ ಚಿನ್ನ ಗೆದ್ದರೆ, ಸೌದಿ ಅರೇಬಿಯಾದ ಮೊಹಮ್ಮದ್ ಅಬ್ದುಲ್ಲಾ ಅಬ್ಕರ್ ಮತ್ತು ಚೈನೀಸ್ ತೈಪೆಯ ಯಾಂಗ್ ಚುನ್-ಹಾನ್ ಕ್ರಮವಾಗಿ ಬೆಳ್ಳಿ ಮತ್ತು ಕಂಚು ಪಡೆದರು.

ಇದನ್ನೂ ಓದಿ:ಏಷ್ಯನ್​ ಗೇಮ್ಸ್: ಟೇಬಲ್​ ಟೆನಿಸ್​ನಲ್ಲಿ ಭಾರತಕ್ಕೆ ಚೊಚ್ಚಲ ಪದಕ; ಬ್ಯಾಡ್ಮಿಂಟನ್​ನಲ್ಲಿ ಶುಭಾರಂಭ

Last Updated : Oct 2, 2023, 9:36 PM IST

ABOUT THE AUTHOR

...view details