ಹ್ಯಾಂಗ್ಝೌ (ಚೀನಾ):ಇಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ನ 13ನೇ ದಿನವಾದ ಇಂದು ಭಾರತದ ಪದಕ ಬೇಟೆ ಮುಂದುವರೆದಿದೆ. ಬಾಂಗ್ಲಾದೇಶವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ಪುರುಷರ ರಿಕರ್ವ್ ತಂಡ ಬೆಳ್ಳಿ ಪದಕ ತನ್ನದಾಗಿಸಿಕೊಂಡಿತು. 62 ಕೆ.ಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಸೋನಮ್ ಮಲಿಕ್ ಹಾಗು ಬ್ಯಾಡ್ಮಿಂಟನ್‌ನಲ್ಲಿ ಪ್ರಣಯ್ ಕಂಚಿಗೆ ತೃಪ್ತಿಪಟ್ಟರು.
ಪುರುಷರ ರಿಕರ್ವ್ ತಂಡ ಫೈನಲ್‌ನಲ್ಲಿ ರಿಪಬ್ಲಿಕ್ ಆಫ್ ಕೊರಿಯಾ ವಿರುದ್ಧ 5-1 ಅಂತರದಿಂದ ಸೋತು ಬೆಳ್ಳಿ ಗೆದ್ದಿತು. ಅತಾನು ದಾಸ್, ಧೀರಜ್ ಬೊಮ್ಮದೇವರ ಮತ್ತು ತುಷಾರ್ ಪ್ರಭಾಕರ್ ಅವರಿದ್ದ ತಂಡ ಕೊರಿಯಾ ಬಿಲ್ಲುಗಾರರ ವಿರುದ್ಧ ಮೊದಲ ಸೆಟ್‌ನಲ್ಲಿ 60 ಅಂಕ ಗಳಿಸಿತು. ಎರಡನೇ ಸೆಟ್‌ನಲ್ಲಿ ಅತಾನು ದಾಸ್ ತಂಡ ಹಿನ್ನಡೆ ಅನುಭವಿಸಿತು. ಮೂರನೇ ಸೆಟ್ ಕೂಡ ಅಂತಿಮ ಬಾಣದವರೆಗೂ ನಿಕಟ ಪೈಪೋಟಿಯಿಂದಲೇ ಕೂಡಿತ್ತು. ಕೊನೆಯಲ್ಲಿ ಕೊರಿಯಾ ಹೆಚ್ಚುವರಿ 10 ಅಂಕಗಳಿಂದ ಚಿನ್ನ ಜಯಿಸಿತು.
ಬ್ಯಾಡ್ಮಿಂಟನ್- ಪ್ರಣಯ್ಗೆ ಕಂಚು:ಬ್ಯಾಡ್ಮಿಂಟನ್‌ನಲ್ಲಿ ಏಳನೇ ಶ್ರೇಯಾಂಕಿತ ಎಚ್.ಎಸ್.ಪ್ರಣಯ್ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ ಕಂಚು ಗೆದ್ದರು. ಸೆಮಿಸ್ನಲ್ಲಿ ವಿಶ್ವದ ನಂ. 8ನೇ ಶ್ರೇಯಾಂಕತ ಚೀನಾದ ಲಿ ಶಿಫೆಂಗ್ ವಿರುದ್ಧ 16-21, 9-21 ರ ಎರಡು ನೇರ ಸೆಟ್‌ಗಳಿಂದ ಮಣಿದರು.
ಈ ವಿಭಾಗದಲ್ಲಿ ನಾಲ್ಕು ದಶಕದ ನಂತರ ಪದಕ ಭಾರತಕ್ಕೆ ಒಲಿದಿದೆ. ಸೈಯದ್ ಮೋದಿ 1982ರ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕಂಚು ಗೆದ್ದಿದ್ದರು. ಇದಾದ ನಂತರ ಪ್ರಣಯ್ ಪದಕ ಜಯಿಸಿದ್ದು ಇದು ಎರಡನೇ ಪದಕವಾಗಿದೆ. ಪ್ರಣಯ್ಗಿದು ಏಷ್ಯನ್ ಗೇಮ್ಸ್ನ ಚೊಚ್ಚಲ ಪದಕವಾಗಿದೆ.
ಸೋನಮ್ ಮಲಿಕ್ಗೆ ಕಂಚು: ಮಹಿಳಾ ಫ್ರೀಸ್ಟೈಲ್ 62 ಕೆ.ಜಿ ಬೌಟ್‌ನಲ್ಲಿ ಭಾರತದ ಗ್ರ್ಯಾಪ್ಲರ್ ಸೋನಮ್ ಮಲಿಕ್ ಚೀನಾದ ಲಾಂಗ್ ಜಿಯಾ ಅವರನ್ನು ಸೋಲಿಸಿದರು. ಪರಿಣಾಮ, ಕಂಚಿನ ಪದಕ ಗೆದ್ದರು. 21 ವರ್ಷದ ಸೋನಮ್ ಮಲಿಕ್ 20 ವರ್ಷದೊಳಗಿನ ವಿಶ್ವ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದರು. ಇದು 19ನೇ ಏಷ್ಯನ್ ಗೇಮ್ಸ್‌ನಲ್ಲಿ ಸುನಿಲ್ ಕುಮಾರ್ ಮತ್ತು ಆಂಟಿಮ್ ಪಂಗಲ್ ಅವರ ನಂತರ ಭಾರತಕ್ಕೆ ಕುಸ್ತಿಯಲ್ಲಿ ಮೂರನೇ ಕಂಚಿ ಪದಕವಾಗಿದೆ. ಬಜರಂಗ್ ಪೂನಿಯಾ, ಅಮನ್ ಸೆಹ್ರಾವತ್ ಮತ್ತು ಕಿರಣ್ ಇಂದು ಕಂಚಿಗಾಗಿ ಅಖಾಡಕ್ಕಿಳಿಯಲಿದ್ದಾರೆ. ಹೀಗಾಗಿ ಪದಕ ನಿರೀಕ್ಷೆ ಇದೆ.
ಕಿಕ್ ವಾಲಿಬಾಲ್ಲ್ಲಿ ಐತಿಹಾಸಿಕ ಕಂಚು: ಸೆಪಕ್ ಟಕ್ರಾ ಅಥವಾ ಕಿಕ್ ವಾಲಿಬಾಲ್ನಲ್ಲಿ ಭಾರತೀಯ ವನಿತೆಯರ ತಂಡ ಕಂಚಿನ ಪದಕ ಗೆದ್ದಿದೆ. ಮೈಪಕ್ ದೇವಿ ಆಯೆಕ್‌ಪಾಮ್ ನೇತೃತ್ವದ ಭಾರತೀಯ ಮಹಿಳಾ ರೆಗು ತಂಡ ಥಾಯ್ಲೆಂಡ್ ಅನ್ನು 0-2 ರಿಂದ ಸೆಮಿಫೈನಲ್‌ನಲ್ಲಿ ಮಣಿಸಿತು. ಇದರಿಂದ ಕಂಚಿನ ಪದಕ ಭಾರತದ ಪಾಲಾಯಿತು. ಮಹಿಳೆಯರ ಕಿಕ್ ವಾಲಿಬಾಲ್ನಲ್ಲಿ ಭಾರತಕ್ಕೆ ಮೊದಲ ಬಾರಿಗೆ ಬಂದ ಪದಕವಾಗಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್ 2023: ಅರ್ಚರಿ ಮಹಿಳಾ ರಿಕರ್ವ್ ವಿಭಾಗದಲ್ಲಿ ಭಾರತಕ್ಕೆ ಕಂಚು... 87ಕ್ಕೆ ಏರಿಕೆ ಆದ ಪದಕಗಳ ಸಂಖ್ಯೆ