ಹ್ಯಾಂಗ್‌ಝೌ (ಚೀನಾ):ಇಂದು(ಭಾನುವಾರ) ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಪುರುಷರ ಲೈಟ್‌ವೇಟ್ ಡಬಲ್ಸ್ ಸ್ಕಲ್ ಫೈನಲ್‌ನಲ್ಲಿ ಭಾರತದ ಅರ್ಜುನ್ ಲಾಲ್ ಜಾತ್ ಮತ್ತು ಅರವಿಂದ್ ಸಿಂಗ್ ಜೋಡಿ ಬೆಳ್ಳಿ ಪದಕ ಗೆದ್ದುಕೊಂಡರು. ಇವರು 6.28.18 ನಿಮಿಷ ಸಮಯದಲ್ಲಿ ನಿಗದಿತ ಗುರಿ ತಲುಪಿ ಈ ಸಾಧನೆ ತೋರಿದರು. ಚೀನಾದ ಫ್ಯಾನ್ ಜುಂಜಿ ಮತ್ತು ಸನ್ ಮ್ಯಾನ್ ಜೋಡಿ 6:23.16 ನಿಮಿಷಗಳಲ್ಲಿ ಸಮಯದಲ್ಲಿ ಗುರಿ ತಲುಪುವ ಮೂಲಕ ಅಗ್ರಸ್ಥಾನದೊಂದಿಗೆ ಚಿನ್ನ ಗೆದ್ದರು.
ಮೊದಲ ಪದಕ ಗೆದ್ದುಕೊಟ್ಟ ಮಹಿಳೆಯರ ಏರ್ ರೈಫಲ್ ತಂಡ:ಇದಕ್ಕೂ ಮುನ್ನ,ಮಹಿಳೆಯರ 10 ಮೀ. ಏರ್ ರೈಫಲ್ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಶೂಟರ್‌ಗಳಾದ ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಈ ಸಾಧನೆ ಮಾಡಿದ್ದಾರೆ. ಇದೇ ಮೊದಲ ಬಾರಿಗೆ ಈ ಸ್ಪರ್ಧೆಯಲ್ಲಿ ಪದಕ ಗೆಲ್ಲುವ ಮೂಲಕ ತಂಡ ಐತಿಹಾಸಿಕ ದಾಖಲೆಯನ್ನೂ ಬರೆಯಿತು.
ಭಾರತದ ಏರ್ ರೈಫಲ್ ತಂಡವು ಒಟ್ಟು 1886 ಅಂಕ ಗಳಿಸಿತು. ಚೀನಾ 1896.6 ಅಂಕಗಳೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಮಂಗೋಲಿಯಾ ಒಟ್ಟು 1880 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ.
ಫೈನಲ್‌ಗೇರಿದ ಮಹಿಳಾ ಕ್ರಿಕೆಟ್ ತಂಡ, ಬೆಳ್ಳಿ ಖಾತ್ರಿ:ಭಾರತ ಮಹಿಳಾ ಕ್ರಿಕೆಟ್ ತಂಡವು ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಮಣಿಸಿ ಏಷ್ಯಾಕಪ್ ಕ್ರೀಡಾಕೂಟದಲ್ಲಿ ಫೈನಲ್ ಪ್ರವೇಶಿಸಿತು. ಬಾಂಗ್ಲಾ ಮಹಿಳೆಯರು 52 ರನ್‌ಗಳಿಗೆ ಆಲೌಟ್ ಆಗಿದ್ದರು. ಈ ಗುರಿ ಬೆನ್ನಟ್ಟಿದ ಭಾರತದ ಮಹಿಳೆಯರು 2 ವಿಕೆಟ್ ಕಳೆದುಕೊಂಡು 52 ರನ್‌ಗಳಿಸುವ ಮೂಲಕ ಪಂದ್ಯ ಗೆದ್ದರು. ಈ ಮೂಲಕ ಭಾರತಕ್ಕೆ ಬೆಳ್ಳಿ ಖಚಿತಪಡಿಸಿದರು.
ಪುರುಷರ ರೋವಿಂಗ್ ಜೋಡಿಗೆ ಕಂಚು: ಇನ್ನು, ರೋವಿಂಗ್ ಸ್ಪರ್ಧೆಯಲ್ಲಿ ಭಾರತದ ಬಾಬು ಲಾಲ್ ಯಾದವ್ ಮತ್ತು ಲೆಖ್ ರಾಮ್ ಜೋಡಿ 3ನೇ ಸ್ಥಾನ ಪಡೆದು ಕಂಚು ಗೆದ್ದುಕೊಂಡಿತು. ಈ ಜೋಡಿ ನಿಗದಿತ ಗುರಿಯನ್ನು 6:50:41 ಸಮಯದಲ್ಲಿ ತಲುಪಿತು.
ಏಷ್ಯನ್ ಗೇಮ್ಸ್ 2023:ಚೀನಾ ಆತಿಥ್ಯದಲ್ಲಿ ನಡೆಯುತ್ತಿರುವ 19ನೇ ಆವೃತ್ತಿಯ ಏಷ್ಯನ್ ಗೇಮ್ಸ್‌ಗೆ ಚೀನಾದ ಹ್ಯಾಂಗ್‌ಝೌನಲ್ಲಿ ಶನಿವಾರ ಅದ್ಧೂರಿ ಚಾಲನೆ ಸಿಕ್ಕಿದೆ. 45 ದೇಶಗಳಿಂದ 12 ಸಾವಿರ ಕ್ರೀಡಾಪಟುಗಳು ಕೂಟದಲ್ಲಿ ಭಾಗವಹಿಸಿದ್ದಾರೆ. ಕ್ರೀಡಾಕೂಟವು ಅ.8 ರಂದು ಕೊನೆಗೊಳ್ಳಲಿದೆ.
ಇದನ್ನೂ ಓದಿ:Asian Games 2023: ಧ್ವಜಧಾರಿಗಳಾಗಿ ಭಾರತವನ್ನು ಮುನ್ನಡೆಸಿದ ಲೊವ್ಲಿನಾ, ಹರ್ಮನ್‌ಪ್ರೀತ್.. ಮಿನಿ ಒಲಂಪಿಕ್ಸ್ಗೆ ಅದ್ಧೂರಿ ಚಾಲನೆ