ಹ್ಯಾಂಗ್‌ಝೌ( ಚೀನಾ):ಶನಿವಾರ ನಡೆದ ಏಷ್ಯನ್ ಗೇಮ್ಸ್ನ ಆರ್ಚರಿ ಮಹಿಳೆಯರ ಸಂಯುಕ್ತ ವೈಯಕ್ತಿಕ ಸ್ಪರ್ಧೆಯಲ್ಲಿ ಜ್ಯೋತಿ ಸುರೇಖಾ ಚಿನ್ನದ ಪದಕ ಹಾಗೂ ಅದಿತಿ ಸ್ವಾಮಿ ಕಂಚಿನ ಪದಕಕ್ಕೆ ಕೊರೊಳಡ್ಡಿದ್ದಾರೆ. ಮತ್ತೊಂದು ಕಡೆ ಪುರುಷರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತದ ಬಿಲ್ಲುಗಾರ ಓಜಸ್ ಡಿಯೋಟಾಲೆ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇನ್ನು ಅಭಿಷೇಕ್ ವರ್ಮಾ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ.
ಮಹಿಳಾ ಕಬಡ್ಡಿ ಫೈನಲ್‌ನಲ್ಲಿ ಭಾರತ ಮಹಿಳಾ ತಂಡವು ಚೈನೀಸ್ ತೈಪೆ ವಿರುದ್ಧ ಚಿನ್ನದ ಪದಕ ಗೆದ್ದ ನಂತರ, ಭಾರತ 100 ಪದಕಗಳ ಮೈಲಿಗಲ್ಲನ್ನು ದಾಟಿದೆ. ಭಾರತ ಮಹಿಳಾ ತಂಡ 26-25 ಅಂಕಗಳಿಂದ ಚೈನೀಸ್ ತೈಪೆ ತಂಡವನ್ನು ಸೋಲಿಸಿ ಸ್ವರ್ಣ ಪದಕ ಗೆದ್ದುಕೊಂಡಿದೆ. ಆರ್ಚರಿಯಲ್ಲಿ ಭಾರತ ಈ ಬಾರಿ ದಾಖಲೆಯ ಸಾಧನೆ ಮಾಡಿದೆ. ಏಷ್ಯನ್ ಗೇಮ್ಸ್‌ನಲ್ಲಿ ದೇಶದ ಅತ್ಯುತ್ತಮ ಪ್ರದರ್ಶನ ಇದಾಗಿದೆ. ಅಷ್ಟೇ ಅಲ್ಲ ಈ ಮೂಲಕ ಭಾರತಕ್ಕೆ ಏಷ್ಯನ್ ಗೇಮ್ಸ್‌ನಲ್ಲಿ ಇದುವರೆಗೂ 25 ಚಿನ್ನ, 35 ಬೆಳ್ಳಿ, 40 ಕಂಚಿನ ಪದಕಗಳು ಲಭಿಸಿದಂತಾಗಿದೆ. ಇನ್ನಷ್ಟು ಚಿನ್ನದ ಪದಕಗಳು ಪದಕ ಪಟ್ಟಿ ಸೇರುವ ಸಾಧ್ಯತೆಗಳೂ ಇವೆ.
ಓಜಸ್ ಡಿಯೋಟಾಲೆ ಚಿನ್ನ, ಅಭಿಷೇಕ್ ವರ್ಮಾ ಬೆಳ್ಳಿ:ಭಾರತದ ಬಿಲ್ಲುಗಾರ ಓಜಸ್ ಡಿಯೋಟಾಲೆ ಇಂದು ನಡೆದ ಫೈನಲ್ ಪಂದ್ಯದಲ್ಲಿ 148-147 ಅಂಕಗಳ ಅಂತರದಿಂದ ಮತ್ತೋರ್ವ ಭಾರತದ ಸ್ಪರ್ಧಿ ಅಭಿಷೇಕ್ ವರ್ಮಾ ಅವರನ್ನು ಸೋಲಿಸಿ ಚಿನ್ನವನ್ನು ಮುಡಿಗೇರಿಸಿಕೊಂಡಿದ್ದಾರೆ. ಅಭಿಷೇಕ್ ವರ್ಮಾ ಅವರು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು.
ಅದಿತಿ ಗೋಪಿಚಂದ್ ಸ್ವಾಮಿಗೆ ಕಂಚು:ಭಾರತದ ಅದಿತಿ ಗೋಪಿಚಂದ್ ಸ್ವಾಮಿ ಅವರು ಆರ್ಚರಿ ಮಹಿಳೆಯರ ವೈಯಕ್ತಿಕ ಕಾಂಪೌಂಡ್ ಸ್ಪರ್ಧೆಯಲ್ಲಿ ಇಂಡೋನೇಷ್ಯಾದ ರೈತ್ ಫಡ್ಲಿ ಅವರನ್ನು 146-140 ಅಂಕಗಳಿಂದ ಸೋಲಿಸುವ ಮೂಲಕ ಕಂಚಿನ ಪದಕ ಗೆದ್ದುಕೊಂಡಿದ್ದಾರೆ. ಶನಿವಾರ ಹ್ಯಾಂಗ್‌ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತಕ್ಕೆ ಈ ಮೂಲಕ 40ನೇ ಕಂಚಿನ ಪದಕ ಲಭಿಸಿದೆ.