ಹ್ಯಾಂಗ್‌ಝೌ (ಚೀನಾ): 2023ರ ಏಷ್ಯನ್ ಗೇಮ್ಸ್ ಅಥ್ಲೆಟಿಕ್ಸ್ನಲ್ಲಿ ಭಾರತದ ಸ್ಪರ್ಧಿಗಳು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಮಹಿಳೆಯರ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಇಂದು ಅನ್ನು ರಾಣಿ ಚಿನ್ನದ ಪದಕ ಗೆದ್ದರು. 62.92 ಮೀಟರ್ ದೂರ ಜಾವೆಲಿನ್ ಎಸೆದ ರಾಣಿ, ಅಗ್ರಸ್ಥಾನ ಅಲಂಕರಿಸಿದರು. ಈ ಮೂಲಕ ಏಷ್ಯನ್ ಗೇಮ್ಸ್ ಜಾವೆಲಿನ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳೆ ಎಂಬ ಖ್ಯಾತಿಗೂ ಪಾತ್ರರಾದರು.
ಅನ್ನು ರಾಣಿ ಅವರಿಗಿದು ಏಷ್ಯಾಡ್ನ ಎರಡನೇ ಪ್ರಶಸ್ತಿ. 2014ರ ಏಷ್ಯನ್ ಗೇಮ್ಸ್‌ನಲ್ಲಿ 59.53 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದರು. ಪ್ರಸಕ್ತ ಕೂಟದಲ್ಲಿ ಶ್ರೀಲಂಕಾದ ದಿಲ್ಹಾನಿ ಲೆಕಾಮ್ಗೆ 61.57 ಮೀಟರ್ ದೂರ ಜಾವೆಲಿನ್ ಎಸೆದು ವೈಯಕ್ತಿಕ ಅತ್ಯುತ್ತಮ ದಾಖಲೆಯೊಂದಿಗೆ ಬೆಳ್ಳಿ ಗೆದ್ದರು. ಲ್ಯು ಹುಯಿಹುಯಿ 61.29 ಮೀಟರ್ ಎಸೆದು ಕಂಚಿನ ಪದಕ ತನ್ನದಾಗಿಸಿಕೊಂಡರು.
ತೇಜಸ್ವಿನ್ ಶಂಕರ್‌ಗೆ ಡೆಕಾಥ್ಲಾನ್‌ನಲ್ಲಿ ಬೆಳ್ಳಿ:ತೇಜಸ್ವಿನ್ ಶಂಕರ್ ಅವರು 1,500 ಮೀ ಓಟದ ಫೈನಲ್‌ನಲ್ಲಿ (ಪುರುಷರ ವಿಭಾಗ) ಡೆಕಾಥ್ಲಾನ್ ಸ್ಪರ್ಧೆಯಲ್ಲಿ 4:48.32 ಸೆ. ಸಮಯದಿಂದ 629 ಅಂಕಗಳನ್ನು ಗಳಿಸಿದರು. ಹೀಗಿದ್ದರೂ ಚೀನಾದ ಸನ್ ಕಿಹಾವೊ ಅವರನ್ನು ಹಿಂದಿಕ್ಕುವಲ್ಲಿ ವಿಫಲರಾದ ತೇಜಸ್ವಿನ್ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಡೆಕಾಥ್ಲಾನ್‌ನಲ್ಲಿ ಎತ್ತರ ಜಿಗಿತ, ಉದ್ದ ಜಿಗಿತ ಮತ್ತು 400 ಮೀ ಓಟ ಸೇರಿದಂತೆ ಇವರು ಒಟ್ಟಾರೆ 7,666 ಸ್ಕೋರ್ ಕಲೆಹಾಕಿದ್ದಾರೆ. ಭಾರತೀಯ ಪುರುಷರ ಡೆಕಾಥ್ಲಾನ್ ತಂಡ ರಾಷ್ಟ್ರೀಯ ದಾಖಲೆಯನ್ನು 8 ಅಂಕದಿಂದ ಹಿಮ್ಮೆಟ್ಟಿಸಿದೆ.