ಹ್ಯಾಂಗ್‌ಝೌ (ಚೀನಾ): ಭಾರತದ ಸ್ಕ್ವಾಷ್ ತಂಡವು 19ನೇ ಏಷ್ಯನ್ ಗೇಮ್ಸ್‌ನಲ್ಲಿ ಇಂದು (ಮಂಗಳವಾರ) ನಡೆದ ಪುರುಷರ ಮತ್ತು ಮಹಿಳೆಯರ ತಂಡ ವಿಭಾಗದಲ್ಲಿ ಕ್ರಮವಾಗಿ ಸಿಂಗಾಪುರ ಮತ್ತು ಪಾಕಿಸ್ತಾನ ವಿರುದ್ಧ ಜಯಭೇರಿ ಬಾರಿಸಿದೆ. ಭಾರತೀಯ ಮಹಿಳಾ ಸ್ಕ್ವಾಷ್ ತಂಡವು ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರ ಪೂಲ್ ಬಿ ಪಂದ್ಯದಲ್ಲಿ ಪಾಕಿಸ್ತಾನವನ್ನು 3-0 ಅಂತರದಿಂದ ಸೋಲಿಸಿತು. 15 ವರ್ಷದ ಅನಾಹತ್ ಸಿಂಗ್, ಅನುಭವಿ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಮತ್ತು ತನ್ವಿ ಖನ್ನಾ ಅವರನ್ನು ಒಳಗೊಂಡ ಭಾರತ ತಂಡವು ಆಯಾ ಪಂದ್ಯಗಳಲ್ಲಿ ಸತತವಾಗಿ ಜಯ ಗಳಿಸಿತು.
ಮೊದಲ ಸಿಂಗಲ್ಸ್ ಪಂದ್ಯದಲ್ಲಿ ಏಷ್ಯನ್ ಗೇಮ್ಸ್‌ಗೆ ಪಾದಾರ್ಪಣೆ ಮಾಡುತ್ತಿದ್ದ ಅನಾಹತ್ ಕೇವಲ 16 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಸಾಡಿಯಾ ಗುಲ್ ಅವರನ್ನು 11-6, 11-6, 11-3 ರಿಂದ ಸೋಲಿಸಿದರು. ಅನುಭವಿ ಆಟಗಾರ್ತಿ ಜೋಶ್ನಾ ಚಿನ್ನಪ್ಪ ಅವರು ನೂರ್ ಉಲ್ ಹುದಾ ಸಾದಿಕ್ ಅವರನ್ನು 11-2, 11-5, 11-7 ರಿಂದ ಸೋಲಿಸಲು ಕೇವಲ 13 ನಿಮಿಷಗಳನ್ನು ತೆಗೆದುಕೊಂಡರು. ತನ್ವಿ 11-3, 11-6, 11-2 ರಲ್ಲಿ ನೂರ್ ಉಲ್ ಐನ್ ಇಜಾಜ್ ಅವರನ್ನು ಸೋಲಿಸಿದಾಗ ಭಾರತವು ಪಾಕಿಸ್ತಾನದ ಮೇಲೆ ತನ್ನ ಪ್ರಾಬಲ್ಯವನ್ನು ಸಾಧಿಸಿತು. ಮುಂದಿನ ಎರಡು ಗುಂಪಿನ ಪಂದ್ಯಗಳಲ್ಲಿ ಭಾರತ ನಾಳೆ ನೇಪಾಳ ಮತ್ತು ಮಕಾವೊ ವಿರುದ್ಧ ಸೆಣಸಲಿದೆ.
ಮತ್ತೊಂದೆಡೆ, ಏಳು ಬಾರಿ ಏಷ್ಯನ್ ಗೇಮ್ಸ್ ಪದಕ ವಿಜೇತ ಸೌರವ್ ಘೋಸಲ್ ಅವರ ಮುಂದಾಳತ್ವದ ಭಾರತೀಯ ಪುರುಷರ ತಂಡವು ಆರಂಭಿಕ ಗುಂಪಿನ ಪಂದ್ಯದಲ್ಲಿ ಸಿಂಗಾಪುರವನ್ನು 3-0 ಅಂತರದಿಂದ ಸೋಲಿಸಿತು. ಆರಂಭಿಕ ಸಿಂಗಲ್ಸ್‌ನಲ್ಲಿ ಹರಿಂದರ್ ಪಾಲ್ ಸಂಧು ಅವರು ಜೆರೋಮ್ ಕ್ಲೆಮೆಂಟ್ ವಿರುದ್ಧ 11-4, 13-11, 8-11, 7-11 ಅಂತರದ ಜಯ ಸಾಧಿಸಿದರು. 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಭಾರತದ ಅತ್ಯುನ್ನತ ಶ್ರೇಯಾಂಕದ ಆಟಗಾರ ಘೋಸಲ್ 11-9, 11-1, 11-4 ರಿಂದ ಸ್ಯಾಮ್ಯುಯೆಲ್ ಕಾಂಗ್ನ್ನು ಮಣಿಸಿದರು. ಮಾರ್ಕಸ್ ಫುವಾ ಅವರನ್ನು 11-7, 11-7, 11-7 ಮೂರು ಗೇಮ್‌ಗಳಲ್ಲಿ ಅಭಯ್ ಸಿಂಗ್ ಸುಲಭವಾಗಿ ಸೋಲಿಸಿ ಭಾರತಕ್ಕೆ ಸುಲಭ ಜಯ ತಂದುಕೊಟ್ಟರು. ಮುಂದೆ ಎರಡನೇ ಪೂಲ್ ಎ ಪಂದ್ಯದಲ್ಲಿ ಕತಾರ್ ವಿರುದ್ಧ ಸೆಣಸಲಿದ್ದಾರೆ.
ರಿಲೇ ಈಜಿನಲ್ಲಿ ಫೈನಲ್‌ಗೆ ಪ್ರವೇಶಿಸಿದ ಭಾರತ: ಭಾರತದ ಈಜುಪಟುಗಳಾದ ಶ್ರೀಹರಿ ನಟರಾಜ್, ಲಿಕಿತ್ ಸೆಲ್ವರಾಜ್, ಸಜನ್ ಪ್ರಕಾಶ್ ಮತ್ತು ತನಿಶ್ ಜಾರ್ಜ್ ಮ್ಯಾಥ್ಯೂ ಪುರುಷರ 4x100 ಮೀಟರ್ ಮೆಡ್ಲೆ ರಿಲೇ ಹೀಟ್ಸ್‌ನಲ್ಲಿ 3:40.84 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಏಷ್ಯನ್ ಗೇಮ್ಸ್‌ನಲ್ಲಿ ಫೈನಲ್‌ಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಪದಕ ಗೆಲ್ಲುವ ಭರವಸೆಯನ್ನು ಈ ತಂಡ ಹೊಂದಿದೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್: ಸೈಲಿಂಗ್ನಲ್ಲಿ ಭಾರತಕ್ಕೆ ಬೆಳ್ಳಿ, ಎರಡು ಕಂಚು ಗೌರವ