ಹ್ಯಾಂಗ್‌ಝೌ (ಚೀನಾ): ಭಾರತದಲ್ಲಿ ಕ್ರಿಕೆಟ್ ಜೊತೆಗೆ ಇತರ ಕ್ರೀಡೆಗಳಿಗೂ ಮಾನ್ಯತೆ ಹೆಚ್ಚಾಗುತ್ತಿದೆ. ಇದರಿಂದ ಕೆಲ ಕ್ರೀಡೆಗಳು ಹೆಚ್ಚು ಶೈನ್ ಆಗುತ್ತಿದೆ. ಕಳೆದ ಕಲ ವರ್ಷಗಳಿಂದ ಭಾರತದ ಷಟ್ಲರ್ಗಳು ವಿಶ್ವ ಬ್ಯಾಡ್ಮಿಂಟನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ. ಅದರಂತೆ ಏಷ್ಯನ್ ಗೇಮ್ಸ್ನಲ್ಲೂ ಬ್ಯಾಡ್ಮಿಂಟನ್‌ನಲ್ಲಿ ಭಾರತದ ಆಟಗಾರರು ಅತ್ಯುತ್ತಮ ಆಟ ಆಡುತ್ತಿದ್ದು, ಪದಕ ಸುತ್ತಿಗೆ ಒಂದು ಹೆಜ್ಜೆ ಹಿಂದಿದ್ದಾರೆ.
ಭಾರತದ ಸ್ಟಾರ್ ಜೋಡಿ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಇಂದು (ಬುಧವಾರ) ಏಷ್ಯನ್ ಗೇಮ್ಸ್‌ನ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಸಾತ್ವಿಕ್ -ಚಿರಾಗ್ ಜೋಡಿ ಇಂಡೋನೇಷ್ಯಾದ ರೋಲಿ ಕಾರ್ನಾಂಡೊ ಲಿಯೊ-ಡೇನಿಯಲ್ ಮಾರ್ಟಿನ್ ಜೋಡಿಯನ್ನು 84 ನಿಮಿಷಗಳಲ್ಲಿ 24-22, 16-21, 21-12 ಮಣಿಸಿದರು. ಏಸ್ ಇಂಡಿಯನ್ ಷಟ್ಲರ್ ಮತ್ತು ಒಲಿಂಪಿಕ್ ಪದಕ ವಿಜೇತ ಪಿವಿ ಸಿಂಧು ಮತ್ತು ಎಚ್‌ಎಸ್ ಪ್ರಣಯ್ ಸಹ ಸಿಂಗಲ್ಸ್ ಸ್ಪರ್ಧೆಯ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ.
55 ನಿಮಿಷ ನಡೆದ ಸ್ಪರ್ಧೆಯಲ್ಲಿ ಪಿವಿ ಸಿಂಧು ತಮ್ಮ ಇಂಡೋನೇಷ್ಯಾ ಎದುರಾಳಿ ಪುತ್ರಿ ಕುಸುಮಾ ವರ್ದಾನಿ ಅವರನ್ನು 2-0 (21-16, 21-16) ಅಂತರದಿಂದ ಮಣಿಸಿದರು. ಪ್ರಣಯ್ ಕಝಾಕಿಸ್ತಾನ್‌ನ ಡಿಮಿಟ್ರಿ ಪನಾರಿನ್ ಅವರನ್ನು 2-0 (21-12, 21-13) ಅಂತರದಿಂದ 29 ನಿಮಿಷದ ಆಟದಲ್ಲಿ ನೇರ ಎರಡು ಗೇಮ್‌ಗಳನ್ನು ಗೆದ್ದರು.
16ನೇ ಸುತ್ತಿನಲ್ಲಿ ಭಾರತದ ಶಟ್ಲರ್‌ಗಳಾದ ಸಾಯಿ ಪ್ರತೀಕ್ ಮತ್ತು ತನಿಶಾ ಕ್ರಾಸ್ಟೊ ಮಿಶ್ರ ಡಬಲ್ಸ್ ಸೋಲನುಭವಿಸಿದರೆ, ಟ್ರೀಸಾ ಜಾಲಿ ಮತ್ತು ಗಾಯತ್ರಿ ಗೋಪಿಚಂದ್ ಮಹಿಳೆಯರ ಡಬಲ್ಸ್ 16ರ ಸುತ್ತಿನಿಂದ ಹೊರಬಿದ್ದರು. ಸಾಯಿ ಪ್ರತೀಕ್ ಮತ್ತು ತನಿಶಾ ಕ್ರಾಸ್ಟೊ ಅವರು ವಿಶ್ವದ 9 ನೇ ಶ್ರೇಯಾಂಕದ ಮಲೇಷ್ಯಾದ ಜೋಡಿಯಾದ ಚೆನ್ ಟ್ಯಾಂಗ್ ಜೀ ಮತ್ತು ತೋ ಈ ವೀ ವಿರುದ್ಧ 21-18, 21-8 ರಿಂದ ಸೋಲು ಕಂಡರು. ಟ್ರೀಸಾ-ಗಾಯತ್ರಿ ಕೊರಿಯಾದ ಜೋಡಿ ಕಿಮ್ ಸೊಯೊಂಗ್ ಮತ್ತು ಕಾಂಗ್ ಹೀಯೊಂಗ್ ವಿರುದ್ಧ 21-15, 18-21, 21-13 ಅಂತರದಲ್ಲಿ ಮಣಿದರು.
ಕಬಡ್ಡಿಯಲ್ಲಿ ಪದಕ ಖಚಿತ:ಭಾರತ ಮಹಿಳಾ ಕಬಡ್ಡಿ ತಂಡ ತನ್ನ ಮೂರನೇ ಪಂದ್ಯದಲ್ಲಿ ಥಾಯ್ಲೆಂಡ್ ವಿರುದ್ಧ 54-22 ಅಂಕಗಳ ಅಂತರದಿಂದ ಗೆದ್ದು ‘ಎ’ ಗುಂಪಿನ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ರಿತು ನೇಗಿ ನೇತೃತ್ವದ ತಂಡ ಸೆಮಿ-ಫೈನಲ್ ಸ್ಥಾನ ಪಡೆಯುವುದರ ಜೊತೆಗೆ 2023ರ ಏಷ್ಯನ್ ಗೇಮ್ಸ್‌ನಲ್ಲಿ ಪದಕವನ್ನು ಖಚಿತಪಡಿಸಿದೆ. ಭಾರತ ತಂಡ ಹಿಂದಿನ ಎರಡು ಮುಖಾಮುಖಿಗಳಲ್ಲಿ ಒಂದನ್ನು ಗೆದ್ದು, ಒಂದನ್ನು ಟೈ ಮಾಡಿಕೊಂಡಿತ್ತು.
ಇಂದಿನ ಪಂದ್ಯದಲ್ಲಿ ಭಾರತದ ಡಿಫೆಂಡರ್‌ಗಳು ಥಾಯ್ಲೆಂಡ್ ಅನ್ನು ನಾಲ್ಕು ಬಾರಿ ಆಲ್‌ಔಟ್ ಮಾಡಿದರು. ರೈಡರ್‌ಗಳು ಐದು ಬೋನಸ್ ಅಂಕಗಳನ್ನು ಗಳಿಸಿ ಆಲ್‌ರೌಂಡ್ ಪ್ರದರ್ಶನ ನೀಡಿದರು. ಶುಕ್ರವಾರ, ಅಕ್ಟೋಬರ್ 6 ರಂದು ನಡೆಯಲಿರುವ ಮಹಿಳೆಯರ ಕಬಡ್ಡಿ ಸೆಮಿಫೈನಲ್‌ನಲ್ಲಿ ಭಾರತ ನೇಪಾಳ ಹಣಾಹಣಿ ನಡೆಸಲಿವೆ.
ಇದನ್ನೂ ಓದಿ:ಏಷ್ಯನ್ ಗೇಮ್ಸ್ 2023: ಬಾಕ್ಸಿಂಗ್ನಲ್ಲಿ ಬೆಳ್ಳಿ, ಆರ್ಚರಿಯಲ್ಲಿ ಚಿನ್ನ, ಸ್ಕ್ವಾಷ್ನಲ್ಲಿ ಕಂಚು... 2018ರ ಏಷ್ಯಾಡ್ ದಾಖಲೆ ಮುರಿದ ಭಾರತ