ಹ್ಯಾಂಗ್‌ಝೌ (ಚೀನಾ):ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುರುಷರ ಹಾಕಿ ತಂಡ ತನ್ನ ಗೆಲುವಿನ ಓಟವನ್ನು ಮುಂದುವರೆಸಿದೆ. ಸೆಮಿಫೈನಲ್ ಹಣಾಹಣಿಯಲ್ಲಿ ದಕ್ಷಿಣ ಕೊರಿಯಾವನ್ನು 5-3 ಗೋಲುಗಳಿಂದ ಬಗ್ಗು ಬಡಿದು ಫೈನಲ್‌ಗೆ ಪ್ರವೇಶಿಸಿದ್ದು, ಚಿನ್ನದ ಪದಕ ಗೆಲ್ಲುವ ಹುಮ್ಮಸ್ಸಿನಲ್ಲಿದೆ. ಹಾರ್ದಿಕ್ ಸಿಂಗ್ (5'), ಮನ್‌ದೀಪ್ ಸಿಂಗ್ (11'), ಲಲಿತ್ ಕುಮಾರ್ ಉಪಾಧ್ಯಾಯ (15'), ಅಮಿತ್ ರೋಹಿದಾಸ್ (24') ಮತ್ತು ಅಭಿಷೇಕ್ (54') ಗಳಿಸಿದ ಗೋಲಿನ ಸಹಾಯದಿಂದ ಭಾರತ ತಂಡವನ್ನು ಫೈನಲ್‌ಗೆ ತಲುಪಿದೆ. ದಕ್ಷಿಣ ಕೊರಿಯಾದ ಜಂಗ್ ಮಂಜೇ (17', 20', 42') ಗಳಿಸಿ ಹ್ಯಾಟ್ರಿಕ್ ತಂಡದ ಗೆಲುವಿಗೆ ಕೊಡುಗೆ ಆಗಲಿಲ್ಲ.
ಫೈನಲ್ ಪಂದ್ಯ ಶುಕ್ರವಾರ ನಡೆಯಲಿದ್ದು, ಇದರಲ್ಲಿ ಭಾರತ ಚೀನಾ ಅಥವಾ ಜಪಾನ್ ಎದುರಿಸಬೇಕಾಗುತ್ತದೆ. ಸೆಮಿಫೈನಲ್ನಲ್ಲಿ ಈ ಎರಡು ತಂಡಗಳು ಮುಖಾಮುಖಿ ಆಗುತ್ತಿದ್ದು, ಗೆದ್ದವರು ಫೈನಲ್‌ಗೆ ಪ್ರವೇಶಿಸಲಿದ್ದಾರೆ. ಭಾರತ ಫೈನಲ್‌ನಲ್ಲಿ ಗೆದ್ದರೆ ಏಷ್ಯನ್ ಗೇಮ್ಸ್‌ನಲ್ಲಿ ಇದು ನಾಲ್ಕನೇ ಚಿನ್ನವಾಗಲಿದೆ ಮತ್ತು ತಂಡವು ಮುಂದಿನ ವರ್ಷ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಸ್ಥಾನ ಕಾಯ್ದಿರಿಸಲಿದೆ.
ಭಾರತವು ತನ್ನ ಎಲ್ಲಾ ಗುಂಪು ಪಂದ್ಯಗಳನ್ನು ಗೆದ್ದ ನಂತರ ಪೂಲ್ ಎ ಅಗ್ರಸ್ಥಾನದಲ್ಲಿತ್ತು. ದಕ್ಷಿಣ ಕೊರಿಯಾ ಪೂಲ್ ಬಿ ರನ್ನರ್ ಅಪ್ ಆಗಿ ಕೊನೆಗೊಂಡಿತು. ಪುರುಷರ ಎಫ್‌ಐಎಚ್ ಶ್ರೇಯಾಂಕದಲ್ಲಿ ಮೂರನೇ ಸ್ಥಾನದಲ್ಲಿರುವ ಭಾರತವು ಪಂದ್ಯದಲ್ಲಿ ಉತ್ತಮ ಆರಂಭ ಪಡೆಯಿತು. ಮೊದಲ ಐದನೇ ನಿಮಿಷಕ್ಕೆ ಹಾರ್ದಿಕ್ ಸಿಂಗ್ ಭಾರತಕ್ಕೆ ಮುನ್ನಡೆ ತಂದುಕೊಟ್ಟರು. 11ನೇ ನಿಮಿಷದಲ್ಲಿ ಚಾಣಕ್ಯ ನಡೆಯಿಂದ ಮಂದೀಪ್ ಸಿಂಗ್ ಇನ್ನೊಂದು ಗೋಲನ್ನು ಪಡೆದುಕೊಂಡರು. ಮೊದಲ ಕ್ವಾರ್ಟರ್ ಅಂತ್ಯಗೊಳ್ಳುವ ಮೊದಲು ಲಲಿತ್ ಕುಮಾರ್ ಉಪಾಧ್ಯಾಯ ಭಾರತದ ಖಾತೆಗೆ ಮತ್ತೊಂದನ್ನು ಸೇರಿಸಿದರು.