ಹ್ಯಾಂಗ್‌ಝೌ (ಚೀನಾ):19ನೇ ಏಷ್ಯನ್ ಗೇಮ್ಸ್ ಎರಡನೇ ದಿನಕ್ಕೆ ಕಾಲಿಟ್ಟಿದೆ. ಭಾರತ ಇಂದು ಮೊದಲ ಚಿನ್ನದ ಸಾಧನೆ ಮಾಡಿದೆ. ಶೂಟಿಂಗ್ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ರುದ್ರಾಂಶ್, ಐಶ್ವರ್ಯ್ ಮತ್ತು ದಿವ್ಯಾಂಶ್ ಚಿನ್ನ ಗೆದ್ದರು. ಇದೇ ಆಟದಲ್ಲಿ ಈ ಮೂವರು ಹೊಸ ವಿಶ್ವದಾಖಲೆಯನ್ನೂ ನಿರ್ಮಿಸಿದರು.
ಶೂಟಿಂಗ್:25 ಮೀಟರ್ ಪುರುಷರ ರ್ಯಾಪಿಡ್ ಫೈರ್ ಪಿಸ್ತೂಲ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ವಿಜಯವೀರ್ ಸಿಧು, ಅನೀಶ್ ಮತ್ತು ಆದರ್ಶ್ ಸಿಂಗ್ ಅವರಿದ್ದ ತಂಡ 1718 ಅಂಕಗಳೊಂದಿಗೆ ಕಂಚಿನ ಪದಕಕ್ಕೆ ಮುತ್ತಿಕ್ಕಿದೆ. ಇನ್ನು ವಿಜಯವೀರ್ ವೈಯಕ್ತಿಕ ಸ್ಪರ್ಧೆಯಲ್ಲಿ ಫೈನಲ್ ತಲುಪಿದ್ದು, ಭಾರತ ಮತ್ತೊಂದು ಪದಕದ ನಿರೀಕ್ಷೆಯಲ್ಲಿದೆ.
ಶೂಟಿಂಗ್- ವೈಯಕ್ತಿಕ ವಿಭಾಗದಲ್ಲಿ ಕಂಚು: ಇದೀಗ ಶೂಟಿಂಗ್ ವಿಭಾಗದಲ್ಲಿ ಭಾರತಕ್ಕೆ ಮತ್ತೊಂದು ಪದಕ ದೊರೆತಿದೆ. 10 ಮೀಟರ್ ಏರ್ ರೈಫಲ್ ವೈಯಕ್ತಿಕ ವಿಭಾಗದಲ್ಲಿ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಕಂಚಿನ ಪದಕ ಗೆದ್ದು ಕೊಟ್ಟಿದ್ದಾರೆ. ಈ ಮೂಲಕ ಭಾರತ 8ನೇ ಪದಕ ಸಾಧನೆ ಮಾಡಿದೆ. ರುದ್ರಾಂಶ್ ಪಾಟೀಲ್ ಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆದು ಪದಕ ಗೆಲ್ಲುವ ಅವಕಾಶದಿಂದ ವಂಚಿತರಾದರು. ಕ್ರೀಡಾಕೂಟದಲ್ಲಿ ಚೀನಾ ಚಿನ್ನ ಮತ್ತು ದಕ್ಷಿಣ ಕೊರಿಯಾ ಬೆಳ್ಳಿ ಸಾಧನೆ ತೋರಿದೆ.
ರೋಯಿಂಗ್‌ನಲ್ಲಿ ಕಂಚು: ರೋಯಿಂಗ್‌ನಲ್ಲಿ ಭಾರತ ಕಂಚಿನ ಪದಕ ಗೆದ್ದುಕೊಂಡಿದೆ. ಪುರುಷರ 4 ವಿಭಾಗದಲ್ಲಿ ಜಸ್ವಿಂದರ್, ಭೀಮ್, ಪುನೀತ್ ಮತ್ತು ಆಶಿಶ್ 6:10.81 ಸಮಯದಲ್ಲಿ 3ನೇ ತಂಡವಾಗಿ ಗುರಿ ತಲುಪಿದರು.