ಹ್ಯಾಂಗ್ಝೌ, ಚೀನಾ:11ನೇ ದಿನದ ಪದಕ ಪಟ್ಟಿಯಲ್ಲಿ ಭಾರತ ಖಾತೆ ತೆರೆದಿದೆ. ಆರ್ಚರಿಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಲಭಿಸಿದೆ. ಜ್ಯೋತಿ ಸುರೇಖಾ ವೆನ್ನಂ ಮತ್ತು ಓಜಸ್ ಡಿಯೋಟಾಲೆ ಜೋಡಿ ಭಾರತಕ್ಕೆ ಈ ಚಿನ್ನ ಗೆದ್ದುಕೊಟ್ಟಿತು. ಭಾರತದ ಜೋಡಿ ಫೈನಲ್‌ನಲ್ಲಿ ದಕ್ಷಿಣ ಕೊರಿಯಾವನ್ನು ಎದುರಿಸಿತು. ಈ ಪಂದ್ಯವನ್ನು ಭಾರತ 159-158 ಅಂಕಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಭಾರತ 71 ಪದಕಗಳನ್ನು ಗೆದ್ದುಕೊಂಡಿದೆ. ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಇದು ಭಾರತದ ಅತ್ಯುತ್ತಮ ಪ್ರದರ್ಶನವಾಗಿದೆ.
ರೇಸ್ವಾಕ್ ಮಿಶ್ರಿತ ಸ್ಪರ್ಧೆಯಲ್ಲಿ ಕಂಚು: ರಾಮ್ ಬಾಬು ಮತ್ತು ಮಂಜು ರಾಣಿ 35 ಕಿಮೀ ರೇಸ್ವಾಕ್ ಮಿಶ್ರಿತ ಸ್ಪರ್ಧೆಯಲ್ಲಿ ಭಾರತಕ್ಕೆ ಕಂಚಿನ ಪದಕವನ್ನು ಗೆದ್ದುಕೊಟ್ಟಿದ್ದಾರೆ. ಈ ಸ್ಪರ್ಧೆಯಲ್ಲಿ ಗುರಿ ಮುಟ್ಟಲು ಅವರಿಬ್ಬರ ಜೋಡಿ 5 ಗಂಟೆ 51 ನಿಮಿಷಗಳು ಮತ್ತು 14 ಸೆಕೆಂಡುಗಳನ್ನು ತೆಗೆದುಕೊಂಡರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 70ಕ್ಕೆ ಏರಿಕೆಯಾಗಿದೆ. 2018 ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತವು 70 ಪದಕಗಳನ್ನು ಗೆದ್ದಿರುವುದು ಗಮನಾರ್ಹ.. ಈ ಮೂಲಕ ಭಾರತ ತನ್ನ ಸಾಧನೆಯನ್ನು ಸುಧಾರಿಸಿಕೊಂಡಿದೆ. ಈ ಬಾರಿ ಎಲ್ಲ ಏಷ್ಯಾಡ್ಗಳಿಗಿಂತ ಹೆಚ್ಚಿನ ಪದಕಗಳನ್ನು ಪಡೆದುಕೊಂಡು ಇತಿಹಾಸ ಬರೆಯಲಾಗಿದೆ.
ಈ ಹಿಂದಿನ ದಾಖಲೆಯನ್ನು ಭಾರತ ಮುರಿಯುವ ಸಾಧ್ಯತೆಗಳಿವೆ. ಇನ್ನೂ ಹಲವು ಪ್ರಮುಖ ಸ್ಪರ್ಧೆಗಳು ಇರುವ ಹಿನ್ನೆಲೆಯಲ್ಲಿ ಭಾರತಕ್ಕೆ ಮತ್ತಷ್ಟು ಪದಕಗಳು ಬರುವ ನಿರೀಕ್ಷೆ ಇದೆ. ಭಾರತ ಈ ಬಾರಿಯ ಏಷ್ಯಾಡ್ನಲ್ಲಿ 100 ಪದಕಗಳನ್ನು ಪಡೆಯುವ ಗುರಿ ಹಾಕಿಕೊಂಡಿದೆ. ಮುಂದಿನ ಎಲ್ಲ ಪಂದ್ಯಗಳಲ್ಲಿ ದೇಶದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ತೋರಿದ್ದೇ ಆದಲ್ಲಿ ಈ ಗುರಿ ತಲುಪುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಲಾಗಿದೆ.