ಹ್ಯಾಂಗ್‌ಝೌ (ಚೀನಾ): ಭಾರತದ ಸ್ಟಾರ್ ಅಥ್ಲೀಟ್ ನೀರಜ್ ಚೋಪ್ರಾ 19ನೇ ಏಷ್ಯಾನ್ ಗೇಮ್ಸ್‌ನಲ್ಲಿ 88.88 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನ ಗೆದ್ದರು. ಇನ್ನೋರ್ವ ಅಥ್ಲಿಟ್ ಕಿಶೋರ್ ಜೆನಾ 87.54 ಮೀಟರ್ ದೂರ ಎಸೆದು ಬೆಳ್ಳಿ ಪದಕ ತನ್ನದಾಗಿಸಿಕೊಂಡರು. ಇದು ಜೆನಾ ಅವರ ದಾಖಲೆಯ ಎಸೆತವಾಗಿದೆ. ಈ ಮೂಲಕ ಜಾವೆಲಿನ್ ಸ್ಪರ್ಧೆಯಲ್ಲಿ ಇಂದು ಭಾರತಕ್ಕೆ ಎರಡು ಪದಕ ದೊರೆಯಿತು.
ನೀರಜ್ ಚೋಪ್ರಾ ಈ ವರ್ಷದ ಎರಡನೇ ಚಿನ್ನದ ಪದಕವನ್ನು ತಮ್ಮ ಅತ್ಯುತ್ತಮ ಎರಡನೇ ದೂರವನ್ನು ದಾಖಲಿಸಿ ಪಡೆದರು. ಇದಕ್ಕೂ ಮೊದಲು ಅವರು 89 ಮೀ ದೂರ ಜಾವೆಲಿನ್ ಎಸೆದರು. ತಮ್ಮ ಮುಂದಿನ ಗುರಿ 90 ಮೀಟರ್ ಮೀರುವುದು ಎಂದು ಹೇಳಿದ್ದಾರೆ. ನೀರಜ್‌ಗೆ ಫೈನಲ್‌ನಲ್ಲಿ ಪೈಪೋಟಿ ನೀಡಿದ್ದು ಭಾರತದವರೇ ಆದ ಕಿಶೋರ್ ಜೆನಾ.
ಮೊದಲ ಎಸೆತದಲ್ಲಿ ನೀರಜ್ ಚೋಪ್ರಾ 82.38 ಮೀ ದಾಖಲಿಸಿದ್ದರು. ಎರಡನೇ ಎಸೆತದಲ್ಲಿ 84.49 ಮೀ ಮಾಡಿದ್ದರು. ಈ ವೇಳೆ ಒಡಿಶಾದ ಕಿಶೋರ್ ಜೆನಾ 86.77 ಮೀ ಎಸೆದು ಅಗ್ರಸ್ಥಾನಕ್ಕೇರಿದರು. ನೀರಜ್ ಮೂರನೇ ಎಸೆತ ಫೌಲ್ ಆಯಿತು. ನಾಲ್ಕನೇ ಎಸೆತದಲ್ಲಿ 88.88 ಮೀಟರ್ ದೂರಕ್ಕೆಸೆದು ದಾಖಲೆ ಬರೆದರು. ಕಿಶೋರ್ 87.54 ಮೀ ಎಸೆದು ಎರಡನೇ ಸ್ಥಾನ ಪಡೆದರು. ನೀರಜ್ ಐದನೇ ಎಸೆತ 80.80 ತಲುಪಿತು ಮತ್ತು ಆರನೇ ಪ್ರಯತ್ನ ಫೌಲ್ ಆಯಿತು.