ಹ್ಯಾಂಗ್‌ಝೌ (ಚೀನಾ): ವಿಶ್ವ ಬ್ಯಾಡ್ಮಿಂಟನ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತೀಯ ಷಟ್ಲರ್ಗಳು 19ನೇ ಏಷ್ಯಾಡ್ನಲ್ಲಿ ಚಿನ್ನ ಗೆಲ್ಲುವಲ್ಲಿ ವಿಫಲರಾದರು. ಚೀನಾದ ವಿರುದ್ಧ ಪ್ರಬಲ ಪೈಪೋಟಿ ನಡೆಸಿ 2-3 ಅಂತರದಿಂದ ಸೋಲುಂಡ ಭಾರತ ಚೊಚ್ಚಲ ಬೆಳ್ಳಿಗೆ ತೃಪ್ತಿಪಟ್ಟಿತು. ಇನ್ನೊಂದೆಡೆ, 100 ಮೀಟರ್ ಹರ್ಡಲ್ಸ್ನಲ್ಲಿ ಜ್ಯೋತಿ ಯರ್ರಾಜಿಗೆ ಬೆಳ್ಳಿ ಪದಕ ಗೆದ್ದರು.
ಜಕಾರ್ತಾ 2018ರಲ್ಲಿ ಪಿ.ವಿ.ಸಿಂಧು ಅವರ ಮಹಿಳಾ ಸಿಂಗಲ್ಸ್ ಫೈನಲ್ ಪಂದ್ಯದ ನಂತರ ಏಷ್ಯನ್ ಗೇಮ್ಸ್ ಬ್ಯಾಡ್ಮಿಂಟನ್‌ನಲ್ಲಿ ಇದು ಭಾರತದ ಎರಡನೇ ಬೆಳ್ಳಿ ಪದಕವಾಗಿದೆ. ಭಾರತ ಈ ಹಿಂದೆ ಮೂರು ಪುರುಷರ ತಂಡ ಕಂಚಿನ ಪದಕಗಳನ್ನು ಗೆದ್ದಿತ್ತು.
ಪುರುಷರ ತಂಡದ ಬ್ಯಾಡ್ಮಿಂಟನ್ ಚಿನ್ನದ ಪದಕದ ಪಂದ್ಯದಲ್ಲಿ ಲಕ್ಷ್ಯ ಸೇನ್ ಮತ್ತು ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ, ಚಿರಾಗ್ ಶೆಟ್ಟಿ ಭಾರತಕ್ಕೆ 2-0 ಮುನ್ನಡೆ ಸಾಧಿಸಿದರು. ಆದರೆ, ಲಿ ಶಿಫೆಂಗ್ ಅವರು ವಿಶ್ವದ ಮಾಜಿ ನಂ. 1 ಕಿಡಂಬಿ ಶ್ರೀಕಾಂತ್ ಅವರನ್ನು ನೇರ ಗೇಮ್‌ಗಳಲ್ಲಿ ಸೋಲಿಸಿದರು. ಲಿಯು ಯುಚೆನ್, ಔ ಕ್ಸುವಾನಿ ಅವರು ಧ್ರುವ್ ಕಪಿಲಾ, ಸಾಯಿ ಪ್ರತೀಕ್ ಅವರನ್ನು ಸೋಲಿಸಿ ಸಮಬಲ ಸಾಧಿಸಿದರು. ನಿರ್ಣಾಯಕ ಪಂದ್ಯದಲ್ಲಿ ವೆಂಗ್ ಹಾಂಗ್ಯಾಂಗ್ ಅವರು ಮಿಥುನ್ ಮಂಜುನಾಥನ್ ವಿರುದ್ಧ 21-12, 21-4 ರಿಂದ ಗೆದ್ದರು. ಇದರಿಂದ ಚೀನಾ ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿತು.