ಹ್ಯಾಂಗ್ಝೌ, ಚೀನಾ :ಏಷ್ಯನ್ ಗೇಮ್ಸ್ 2023ರ ಒಂಬತ್ತನೇ ದಿನವಾದ ಇಂದು (Asian Games 2023) ಭಾರತೀಯ ಅಥ್ಲೀಟ್‌ಗಳು ಮೈದಾನಕ್ಕಿಳಿದು ಈಗಾಗಲೇ ಎರಡು ಕಂಚು ತಮ್ಮದಾಗಿಸಿಕೊಂಡಿದ್ದಾರೆ. ಇಂದು ಮುಂಜಾನೆ ಭಾರತೀಯ ಪುರುಷ ಮತ್ತು ಮಹಿಳೆಯರ ರೋಲರ್ ಸ್ಕೇಟರ್‌ಗಳು ತಮ್ಮ ವಿಭಾಗಗಳಲ್ಲಿ ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಭಾರತಕ್ಕೆ ಉತ್ತಮ ಆರಂಭವನ್ನು ನೀಡಿದರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 53ರಿಂದ 55ಕ್ಕೆ ಏರಿಕೆಯಾಗಿದೆ. ಭಾರತೀಯ ಆಟಗಾರರು ಸಾಧ್ಯವಾದಷ್ಟು ಸ್ಪರ್ಧೆಗಳಲ್ಲಿ ಗೆದ್ದು ಪದಕಗಳನ್ನು ತಮ್ಮ ದೇಶಕ್ಕೆ ಅರ್ಪಿಸುವುದು ಅವರ ಮುಖ್ಯ ಉದ್ದೇಶವಾಗಿದೆ.
ಇಂದು ಪದಕಗಳ ಖಾತೆ ತೆರೆದ ಭಾರತ:ಭಾರತೀಯ ರೋಲರ್ ಸ್ಕೇಟರ್‌ಗಳು ಪುರುಷರ ಮತ್ತು ಮಹಿಳೆಯರ 3000 ಮೀಟರ್ ಟೀಮ್ ರಿಲೇ ಸ್ಪರ್ಧೆಗಳಲ್ಲಿ ಎರಡು ಕಂಚಿನ ಪದಕಗಳನ್ನು ಗೆಲ್ಲುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು. ಸಂಜನಾ ಬತುಲಾ, ಕಾರ್ತಿಕಾ ಜಗದೀಶ್ವರನ್, ಹೀರಾಲ್ ಸಾಧು ಮತ್ತು ಆರತಿ ಕಸ್ತೂರಿ ರಾಜ್ ಅವರಿದ್ದ ಮಹಿಳಾ ತಂಡ ಸ್ಪರ್ಧೆಯ ಒಂಬತ್ತನೇ ದಿನದಂದು 4:34.861 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಭಾರತದ ಖಾತೆ ತೆರೆದರು. ಭಾರತದ ಕ್ವಾರ್ಟೆಟ್ ಚಿನ್ನದ ಪದಕ ವಿಜೇತರಾದ ಚೈನೀಸ್ ತೈಪೆ (4:19.447) ಮತ್ತು ದಕ್ಷಿಣ ಕೊರಿಯಾ (4:21.146) ನಂತರ ಮುಗಿಸಿದರು.
ಇದಾದ ಬಳಿಕ ಆರ್ಯನ್‌ಪಾಲ್ ಸಿಂಗ್ ಘುಮಾನ್, ಆನಂದ್‌ಕುಮಾರ್ ವೇಲ್‌ಕುಮಾರ್, ಸಿದ್ಧಾಂತ್ ಕಾಂಬ್ಳೆ ಮತ್ತು ವಿಕ್ರಮ್ ಇಂಗ್ಲೆ ಅವರು ಪುರುಷರ ತಂಡ ರಿಲೇಯಲ್ಲಿ 4:10.128 ಸೆಕೆಂಡ್‌ಗಳೊಂದಿಗೆ ಎರಡನೇ ಕಂಚಿನ ಪದಕ ಪಡೆದರು.