ಕೊಲಂಬೊ : ಸದೀರ ಸಮರವಿಕ್ರಮ ಅವರ ಆಕರ್ಷಕ 93 ರನ್ ಮತ್ತು ಬೌಲರ್‌ಗಳ ಸಾಂಘಿಕ ಪ್ರಯತ್ನದ ಫಲವಾಗಿ ಶ್ರೀಲಂಕಾ ತಂಡವು ಬಾಂಗ್ಲಾದೇಶವನ್ನು 21 ರನ್‌ಗಳಿಂದ ಮಣಿಸಿತು. ಏಷ್ಯಾಕಪ್ ಟೂರ್ನಿಯ ಸೂಪರ್ ಫೋರ್ ಪಂದ್ಯವು ಕೊಲಂಬೊದ ಆರ್.ಪ್ರೇಮದಾಸ ಸ್ಟೇಡಿಯಂನಲ್ಲಿ ಕಳೆದ ರಾತ್ರಿ ನಡೆಯಿತು.
ಬಾಂಗ್ಲಾದಿಂದ ಮೊದಲು ಬ್ಯಾಟಿಂಗ್ ಸವಾಲು ಎದುರಿಸಿದ ಲಂಕಾ, ಸಮರವಿಕ್ರಮ ಮತ್ತು ಕುಸಲ್ ಮೆಂಡಿಸ್ ಅವರ ಜವಾಬ್ದಾರಿಯುತ ಅರ್ಧಶತಕದ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 257 ರನ್ ಪೇರಿಸಿತು.
ನಾಯಕ ದಸುನ್ ಶನಕ (3/28), ಮಥೀಶ ಪಥಿರಣ (3/58) ಮತ್ತು ಸ್ಪಿನ್ನರ್ ಮಹೀಶ ತೀಕ್ಷಣ (3/68) ಅವರ ಕರಾರುವಾಕ್ ಶಿಸ್ತಿನ ಬೌಲಿಂಗ್ ದಾಳಿಯ ಪರಿಣಾಮ ಬಾಂಗ್ಲಾದೇಶ 236 ರನ್ ಪೇರಿಸಲಷ್ಟೇ ಸಾಧ್ಯವಾಯಿತು. 48.1 ಓವರ್‌ಗಳಲ್ಲಿ ಬಾಂಗ್ಲಾ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿಗೆ ಶರಣಾಯಿತು.
ಇದಕ್ಕೂ ಮೊದಲು, ಸಮರವಿಕ್ರಮ ಆಕರ್ಷಕ ಬ್ಯಾಟಿಂಗ್ ಮೂಲಕ 8 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳೊಂದಿಗೆ 93 ರನ್ ಸಂಪಾದಿಸಿದರು. ಬಾಂಗ್ಲಾ ತಂಡದ ವೇಗಿಗಳಾದ ಹಸನ್ ಮಹಮೂದ್ (3/57), ಶೋರಿಫುಲ್ ಇಸ್ಲಾಂ (2/48) ಮತ್ತು ತಸ್ಕಿನ್ ಅಹಮದ್ ( 3/62) ಸೇರಿ ಒಟ್ಟಾರೆಯಾಗಿ ಲಂಕಾದ 8 ವಿಕೆಟ್‌ಗಳನ್ನು ಉರುಳಿಸಿದರು. ಬ್ಯಾಟರ್‌ಗಳಾದ ತೌಹಿದ್ ಹೃದಯ್ 82, ಮುಷ್ಪಿಕರ್ ರಹೀಂ 29 ರನ್ ಕಲೆ ಹಾಕಿದ್ದರು.
ಇದನ್ನೂ ಓದಿ :ಎಂಟು ದಿನದ ಬಳಿಕ ಮತ್ತೆ ಪಾಕ್ ಮೇಲೆ ಪಂದ್ಯ.. ಭಾರತ ತಂಡದಲ್ಲಿ ಎರಡು ಬದಲಾವಣೆ ಖಂಡಿತಾ!