ನ್ಯೂಯಾರ್ಕ್: ಅಮೆರಿಕ ಓಪನ್‌ನಲ್ಲಿ ಉತ್ತಮ ಪ್ರದರ್ಶನ ನೀಡುಯತ್ತಿರುವ ಅರೀನಾ ಸಬಲೆಂಕಾ 16ನೇ ಸುತ್ತಿಗೆ ಸ್ಥಾನ ಪಡೆದಿದ್ದಾರೆ. ಯುಎಸ್ ಓಪನ್ ಮುಗಿದ ನಂತರ ಸೆಪ್ಟೆಂಬರ್ 11 ರಂದು ಬಿಡುಗಡೆಯಾಗುವ ಶ್ರೇಯಾಂಕದಲ್ಲಿ ಅರೀನಾ ಸಬಲೆಂಕಾ ಮಹಿಳಾ ಸಿಂಗಲ್ಸ್ನಲ್ಲಿ ವಿಶ್ವ ನಂ.1 ಆಟಗಾರ್ತಿ ಆಗಲಿದ್ದಾರೆ. ಇಗಾ ಸ್ವಿಯಾಟೆಕ್ ಅವರನ್ನು ಹಿಂದಿಕ್ಕೆ ಅಗ್ರ ಸ್ಥಾನವನ್ನು ಅವರು ಅಲಂಕರಿಸಲಿದ್ದಾರೆ.
25 ವರ್ಷ ವಯಸ್ಸಿನ ಅರೀನಾ ಸಬಲೆಂಕಾ ವುಮೆನ್ಸ್ ಟೆನಿಸ್ ಅಸೋಸಿಯೇಶನ್ (ಡಬ್ಲ್ಯುಟಿಎ) ವಿಶ್ವ ನಂ.1 ಶ್ರೇಯಾಂಕವನ್ನು ವಶಪಡಿಸಿಕೊಂಡ 29 ನೇ ಮಹಿಳೆಯಾಗಲಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಸಿಂಗಲ್ಸ್ ಮತ್ತು ಡಬಲ್ಸ್ ಎರಡರಲ್ಲೂ ನಂ.1 ಸ್ಥಾನಗಳನ್ನು ಅಲಂಕರಿಸಿದ ಎಂಟನೇ ಆಟಗಾರ್ತಿಯಾಗಿದ್ದಾರೆ. ಫೆಬ್ರವರಿ 2021 ರಲ್ಲಿ ಡಬಲ್ಸ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಅಂಕರಿಸಿದ್ದರು.
ವಿಶ್ವ ನಂ.1 ಶ್ರೇಯಾಂಕೆತೆ ಇಗಾ ಸ್ವಿಯಾಟೆಕ್ ಅಮೆರಿಕನ್ ಓಪನ್‌ನಲ್ಲಿ ಜೆಲೆನಾ ಒಸ್ಟಾಪೆಂಕೊ ಅವರ ವಿರುದ್ಧ 16ನೆ ಸುತ್ತಿನಲ್ಲಿ ಸೋಲು ಕಂಡಿದ್ದು, ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಗಾ ಸ್ವಿಯಾಟೆಕ್ ಸೋಲು ಕಾಣುತ್ತಿದ್ದಂತೆ ನಂ.1 ಸ್ಥಾನದಿಂದ ಕುಸಿದಿದ್ದಾರೆ. ಸತತ 75 ವಾರಗಳ ಕಾಲ ಅಗ್ರಸ್ಥಾನ ಕಾಯ್ದುಕೊಂಡಿದ್ದ ಇಗಾ ಎರಡನೇ ಸ್ಥಾನಕ್ಕೆ ಕುಸಿಯಲಿದ್ದಾರೆ. 16ನೇ ಸುತ್ತಿನಲ್ಲಿ ಡೇರಿಯಾ ಕಸಟ್ಕಿನಾ ಅವರನ್ನು ನಾಳೆ (ಮಂಗಳವಾರ) ಅರೀನಾ ಸಬಲೆಂಕಾ ಎದುರಿಸಲಿದ್ದಾರೆ. ಈ ಪಂದ್ಯ ಗೆದ್ದಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶ ಪಡೆಯಲಿದ್ದಾರೆ.