ದಕ್ಷಿಣ ಕೊರಿಯಾ: ಭಾರತೀಯ ಮಹಿಳಾ ರಿಕರ್ವ್ ತಂಡ ರಿದ್ಧಿ, ಕೋಮಲಿಕಾ ಬಾರಿ ಮತ್ತು ಅಂಕಿತಾ ಭಕತ್ ಆರ್ಚರಿ ವಿಶ್ವಕಪ್ 2022 ರ ಹಂತ 2 ರಲ್ಲಿ ಚೈನೀಸ್ ತೈಪೆ ತಂಡವನ್ನು ಸೋಲಿಸುವ ಮೂಲಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ.
ಭಾರತದ ಯುವ ತ್ರಿವಳಿಗಳಾದ ರಿದ್ಧಿ, ಕೋಮಾಲಿಕಾ ಮತ್ತು ಅಂಕಿತಾ ಅವರು ತಮ್ಮ ಪ್ರತಿಸ್ಪರ್ಧಿ ಚೈನೀಸ್ ತೈಪೆ ವಿರುದ್ಧ 6-2 (56-52, 54-51, 54-55, 55-54) ಮೇಲುಗೈ ಸಾಧಿಸಿದ್ದಾರೆ.
ಚೈನೀಸ್ ತೈಪೆ ವಿರುದ್ಧ ಮೊದಲ ಎರಡು ಸೆಟ್‌ಗಳಲ್ಲಿ 4-0 ಮುನ್ನಡೆ ಸಾಧಿಸಿದರಾದರೂ ತಂಡವು ಮೂರನೇ ಸೆಟ್ ಕಳೆದುಕೊಂಡಿತು. ಆದರೆ, ನಾಲ್ಕನೇ ಸೆಟ್‌ನಲ್ಲಿ ಮತ್ತೇ ಹಿಂತಿರುಗಿ ಪಂದ್ಯ ಗೆದ್ದರು.
ಗ್ವಾಂಗ್ಜುನಲ್ಲಿ ನಡೆದ ಆರ್ಚರಿ ವಿಶ್ವಕಪ್‌ನಲ್ಲಿ ಭಾರತಕ್ಕೆ ಇದು ಎರಡನೇ ಕಂಚಿನ ಪದಕವಾಗಿದೆ. ಇದಕ್ಕೂ ಮುನ್ನ ಬುಧವಾರ ಅವ್ನೀತ್ ಕೌರ್, ಮುಸ್ಕಾನ್ ಕಿರಾರ್ ಮತ್ತು ಪ್ರಿಯಾ ಗುರ್ಜಾರ್ ಅವರಿದ್ದ ಮಹಿಳಾ ತಂಡ ಕಂಚಿನ ಪದಕ ಗೆದ್ದುಕೊಂಡಿತ್ತು.
ಇನ್ನು ಒಲಿಂಪಿಯನ್‌ಗಳಾದ ತರುಣ್‌ದೀಪ್ ರೈ ಮತ್ತು ಜಯಂತ್ ತಾಲೂಕ್‌ದಾರ್ ಮತ್ತು ಯುವ ನೀರಜ್ ಚೌಹಾಣ್‌ರ ಭಾರತೀಯ ಪುರುಷರ ರಿಕರ್ವ್ ತಂಡವು ಕ್ವಾರ್ಟರ್‌ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಸೋಲುಂಡಿದೆ.
ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತ ಅಭಿಷೇಕ್ ವರ್ಮಾ ನೇತೃತ್ವದ ಭಾರತೀಯ ಪುರುಷರ ಸಂಯುಕ್ತ ತಂಡ ಅಮನ್ ಸೈನಿ ಮತ್ತು ರಜತ್ ಚೌಹಾನ್ ಶನಿವಾರದಂದು ತವರಿನ ನೆಚ್ಚಿನ ದಕ್ಷಿಣ ಕೊರಿಯಾ ಸೋಲಿಸಿ ಭಾರತಕ್ಕೆ ಒಂದು ಬೆಳ್ಳಿ ಪದಕವನ್ನು ಖಚಿತಪಡಿಸಿದ್ದರು. ಕಳೆದ ತಿಂಗಳು ಟರ್ಕಿಯಲ್ಲಿ ನಡೆದ ಆರ್ಚರಿ ವಿಶ್ವಕಪ್ ಸ್ಟೇಜ್ 1 ಈವೆಂಟ್‌ನಲ್ಲಿ ಭಾರತೀಯ ಪುರುಷರ ಸಂಯುಕ್ತ ತಂಡವು ಚಿನ್ನದ ಪದಕವನ್ನು ಗೆದ್ದುಕೊಂಡಿರುವುದು ಗಮನಾರ್ಹ.
ಇದನ್ನೂ ಓದಿ: ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಮೈ.ವಿ. ರವಿಶಂಕರ್